alex Certify ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಏಕೆ ಮುಖ್ಯ…? ಕ್ಯಾಲ್ಸಿಯಂ ಕೊರತೆಯಿಂದ ತಾಯಿ ಮತ್ತು ಮಗುವಿಗೆ ಆಗಬಹುದು ಇಂಥಾ ಅಪಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಏಕೆ ಮುಖ್ಯ…? ಕ್ಯಾಲ್ಸಿಯಂ ಕೊರತೆಯಿಂದ ತಾಯಿ ಮತ್ತು ಮಗುವಿಗೆ ಆಗಬಹುದು ಇಂಥಾ ಅಪಾಯ…!

ಗರ್ಭಾವಸ್ಥೆ ಮಹಿಳೆಯ ಜೀವನದ ವಿಶೇಷ ಸಮಯ. ಈ ಅವಧಿಯಲ್ಲಿ ತಾಯಿ ಮತ್ತು ಮಗುವಿಗೆ ಸರಿಯಾದ ಪೋಷಣೆ ಬಹಳ ಮುಖ್ಯ. ಗರ್ಭಿಣಿ ಹಾಗೂ ಮಗುವಿಗೆ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಪ್ರಮುಖವಾದದ್ದು ಕ್ಯಾಲ್ಸಿಯಂ. ಗರ್ಭಾವಸ್ಥೆಯಲ್ಲಿ ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಅವಶ್ಯಕ. ಏಕೆಂದರೆ ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಏಕೆ ಮುಖ್ಯ? ಅದರ ಕೊರತೆಯ ಅಪಾಯಗಳೇನು ಎಂದು ತಿಳಿಯೋಣ.

ಗರ್ಭಿಣಿಯರಿಗೆ ಕ್ಯಾಲ್ಸಿಯಂ ಏಕೆ ಮುಖ್ಯ?

ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಮಗುವಿನ ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಕ್ಯಾಲ್ಸಿಯಂ ತಾಯಿಯ ಮೂಲಕ ಮಗುವನ್ನು ತಲುಪುತ್ತದೆ. ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ  ಮಗುವಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಇದಲ್ಲದೆ ಕ್ಯಾಲ್ಸಿಯಂ ಕೊರತೆಯಿಂದ ಗರ್ಭಿಣಿಯ ಮೂಳೆಗಳು ದುರ್ಬಲವಾಗಬಹುದು, ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳ ಅಪಾಯ ಸಹ  ಹೆಚ್ಚಾಗುತ್ತದೆ.

ಮಗುವಿಗೆ ಅಪಾಯ

ಕ್ಯಾಲ್ಸಿಯಂ ಕೊರತೆ ಮಗುವಿಗೆ ಅಪಾಯಕಾರಿ. ಇದರಿಂದ ಮಗುವಿನ ಮೂಳೆಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. ಹುಟ್ಟಿದ ನಂತರ ಮಗುವಿನಲ್ಲಿ ದೌರ್ಬಲ್ಯಕ್ಕೆ ಕಾರಣವಾಗಬಹುದು. ಇದಲ್ಲದೆ ಮಗುವಿನ ಹೃದಯ, ಸ್ನಾಯುಗಳು ಮತ್ತು ನರಗಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಗುವಿಗೆ ಗರ್ಭಾಶಯದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಸಿಗದಿದ್ದರೆ ಅದು ಭವಿಷ್ಯದಲ್ಲಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಪಡೆಯುವುದು ಹೇಗೆ?

ಗರ್ಭಾವಸ್ಥೆಯಲ್ಲಿ ಮಹಿಳೆಗೆ ದಿನಕ್ಕೆ ಸುಮಾರು 1000 ರಿಂದ 1200 ಮಿಗ್ರಾಂ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಹಾಲು, ಮೊಸರು, ಚೀಸ್, ಸೊಪ್ಪು, ತರಕಾರಿಗಳು, ಎಳ್ಳು ಮತ್ತು ಬಾದಾಮಿಯಂತಹ ಆಹಾರ ಪದಾರ್ಥಗಳಿಂದ ಇದನ್ನು ಪಡೆಯಬಹುದು. ಆಹಾರದಿಂದ ಸಾಕಷ್ಟು ಕ್ಯಾಲ್ಸಿಯಂ ಸಿಗದೇ ಇದ್ದ ಸಂದರ್ಭದಲ್ಲಿ ವೈದ್ಯರು ಸಪ್ಲಿಮೆಂಟ್‌ಗಳನ್ನು ನೀಡುತ್ತಾರೆ.

ಗರ್ಭಾವಸ್ಥೆಯಲ್ಲಿ ತಾಯಿ ಆರೋಗ್ಯವಾಗಿರುವುದು ಬಹಳ ಮುಖ್ಯ.  ತಾಯಿ ಆರೋಗ್ಯವಾಗಿದ್ದಲ್ಲಿ ಮಾತ್ರ ಮಗು ಆರೋಗ್ಯವಾಗಿರುತ್ತದೆ. ಆದ್ದರಿಂದ ಗರ್ಭಿಣಿಯರು ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಬೇಕು. ನಿಯಮಿತವಾಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...