
ಅಹಮದಾಬಾದ್: ಕಾಂಗ್ರೆಸ್ ಜನರ ಭಾವನೆಗಳಿಗೆ ಧಕ್ಕೆ ತರಲು ಕೆಲಸ ಮಾಡುತ್ತದೆ. ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಪಕ್ಷದ ಮಾಜಿ ನಾಯಕ ಹಾರ್ದಿಕ್ ಪಟೇಲ್ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಹಳೆಯ ಪಕ್ಷ ಮತ್ತು ಅದರ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಾರ್ದಿಕ್ ಪಟೇಲ್, ಕಾಂಗ್ರೆಸ್ ಪಕ್ಷ ಜನರ ಭಾವನೆಗಳನ್ನು ನೋಯಿಸುವ ಕೆಲಸ ಮಾಡುತ್ತದೆ, ಯಾವಾಗಲೂ ಹಿಂದೂ ಧರ್ಮದ ನಂಬಿಕೆಯನ್ನು ಹಾಳುಮಾಡಲು ಪ್ರಯತ್ನಿಸುತ್ತದೆ ಎಂದು ನಾನು ಮೊದಲೇ ಹೇಳಿದ್ದೇನೆ. ಇಂದು, ಮಾಜಿ ಕೇಂದ್ರ ಸಚಿವ ಮತ್ತು ಗುಜರಾತ್ ಕಾಂಗ್ರೆಸ್ ನಾಯಕರೊಬ್ಬರು ರಾಮಮಂದಿರಕ್ಕಾಗಿ ಇಟ್ಟಿರುವ ಇಟ್ಟಿಗೆಗಳ ಮೇಲೆ ನಾಯಿಗಳು ಮೂತ್ರ ವಿಸರ್ಜಿಸುತ್ತವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಮತ್ತು ಅದರ ನಾಯಕರಿಗೆ ಭಗವಾನ್ ಶ್ರೀರಾಮನೊಂದಿಗೆ ಏನು ದ್ವೇಷವಿದೆ ಎಂದು ನಾನು ಕೇಳಲು ಬಯಸುತ್ತೇನೆ. ಹಿಂದೂಗಳನ್ನು ಇಷ್ಟು ದ್ವೇಷಿಸುವುದೇಕೆ? ಶತಮಾನಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಆದರೂ ಕಾಂಗ್ರೆಸ್ ನಾಯಕರು ಭಗವಾನ್ ಶ್ರೀರಾಮನ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ತೊರೆದ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.