ಬೆಂಗಳೂರು : ನಾನು ಮೊಬೈಲ್ ಬಳಸುವುದಿಲ್ಲ ಎಂದು ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಜನರಿಗೆ ಸಿಎಂ ಯಾಕೆ ಮೊಬೈಲ್ ಬಳಸಲ್ಲ ಎಂಬ ಕುತೂಹಲವಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯನವರೇ ಕಾರಣ ನೀಡಿದ್ದಾರೆ.
ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಮೊದಲು ನಾನು 7-8 ತಿಂಗಳು ಮೊಬೈಲ್ ಬಳಸಿದ್ದೆ. ಆಗ ಕೆಲವರು ರಾತ್ರಿಯೆಲ್ಲ ಫೋನ್ ಮಾಡಿ ತೊಂದರೆ ಕೊಡುತ್ತಿದ್ದರು. ಕೆಲವರು ಎಣ್ಣೆ ಹೊಡೆದು ಫೋನ್ ಮಾಡಿ ಕಿರಿಕಿರಿ ಮಾಡುತ್ತಿದ್ದರು. ಹೀಗಾಗಿ ಮೊಬೈಲ್ ಬಳಕೆ ಮಾಡುವುದನ್ನು ನಿಲ್ಲಿಸಿಬಿಟ್ಟೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವೈಯಕ್ತಿಕವಾಗಿ ನನ್ನ ಹತ್ತಿರ ಫೋನ್ ಇಲ್ಲ, ಸರ್ಕಾರಿ ಕೆಲಸಗಳು ಇನ್ನಿತರ ತುರ್ತು ವಿಚಾರಕ್ಕೆ ನಮ್ಮ ಅಧಿಕಾರಿಗಳು, ಆಪ್ತಸಹಾಯಕರ ಫೋನ್ ಬಳಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
BSY ಪ್ರತಿಭಟನೆ ರಾಜಕೀಯ ಗಿಮಿಕ್; ಮಾಜಿ ಸಿಎಂ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಸದನದ ಒಳಗೂ ಹೊರಗೂ ಪ್ರತಿಭಟನೆ ಮಾಡುತ್ತೇವೆ. 10 ಕೆಜಿ ಅಕ್ಕಿಯಲ್ಲಿ ಒಂದು ಗ್ರಾಂ ಕಡಿಮೆ ಆದರೂ ಧರಣಿ ನಡೆಸುತ್ತೇವೆ ಎಂದು ಹೇಳಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಪ್ರತಿಭಟನೆ ರಾಜಕೀಯ ಗಿಮಿಕ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಹದೇವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನವರಿಗೆ ಧರಣಿ ಮಾಡುವ ಯಾವುದೆ ನೈತಿಕತೆ ಇಲ್ಲ, ಕಾರಣ ಯಡಿಯೂರಪ್ಪ ತಮ್ಮ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಿದ್ರಾ ? ಇಲ್ಲ, ಯಡಿಯೂರಪ್ಪ ಸರ್ಕಾರ ಇದ್ದಾಗ ಕೊಟ್ಟ ಭರವಸೆ ಈಡೇರಿಸಿದ್ರಾ ? ಎಂದು ಪ್ರಶ್ನಿಸಿದ್ದಾರೆ.
ನಾವು ನಮ್ಮ ಗ್ಯಾರಂಟಿಗಳನ್ನು ಜಾರಿಗೆ ಮಾಡಲು ಸಿದ್ಧರಿದ್ದೇವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ. ಈ ಕುರಿತು ನಾವು ಈಗಾಗಲೇ ತೀರ್ಮಾನ ಮಾಡಿದ್ದೇವೆ. ಹೀಗಿರುವಾಗ ಯಡಿಯೂರಪ್ಪ ಪ್ರತಿಭಟನೆ ಮಾಡುವುದಾಗಿ ಹೇಳುತ್ತಿರುವುದು ರಾಜಕೀಯ ಗಿಮಿಕ್ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.