ಚಳಿಗಾಲ ಬಂದೇಬಿಟ್ಟಿದೆ. ಋತುಮಾನ ಬದಲಾದಂತೆ ಅದಕ್ಕೆ ತಕ್ಕಂತಹ ವಿವಿಧ ಬಗೆಯ ತರಕಾರಿಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಅವುಗಳಲ್ಲಿ ಬಹಳ ಕಡಿಮೆ ಜನರು ಇಷ್ಟಪಡುವ ತರಕಾರಿಯೆಂದರೆ ಹಾಗಲಕಾಯಿ. ಹಾಗಲಕಾಯಿಯ ರುಚಿ ತುಂಬಾ ಕಹಿ. ಹಾಗಾಗಿ ಇದನ್ನು ಅನೇಕರು ಇಷ್ಟಪಡುವುದಿಲ್ಲ.
ಅದರಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳಿದವರೆಲ್ಲ ಹಾಗಲಕಾಯಿಯನ್ನು ತಪ್ಪದೇ ಸೇವಿಸುತ್ತಾರೆ. ಹಾಗಲಕಾಯಿ ರಕ್ತವನ್ನು ಶುದ್ಧೀಕರಿಸುತ್ತದೆ. ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಬಳ್ಳಿಯಲ್ಲಿ ಬೆಳೆಯುವ ತರಕಾರಿ ಇದು. ಬಳ್ಳಿಯಲ್ಲಿ ಬೆಳೆಯುವ ಸೋರೆಕಾಯಿ, ಚೀನೀಕಾಯಿ, ಸೌತೆಕಾಯಿ ಮುಂತಾದ ತರಕಾರಿಗಳು ಕಹಿ ರುಚಿಯನ್ನು ಹೊಂದಿಲ್ಲ. ಪ್ರತಿ ತರಕಾರಿಗೂ ತನ್ನದೇ ಆದ ರುಚಿ ಇದೆ. ಹಾಗಲಕಾಯಿ ಕಹಿಯಾಗಿದ್ದರೂ ತುಂಬಾನೇ ರುಚಿಕರವಾಗಿರುತ್ತದೆ.
ಹಾಗಲಕಾಯಿ ಆರೋಗ್ಯ ಪೂರ್ಣವಾಗಿರುವುದರಿಂದ ಜನರು ಇಷ್ಟವಿಲ್ಲದಿದ್ದರೂ ಅದನ್ನು ತಿನ್ನುತ್ತಾರೆ. ಹಾಗಲಕಾಯಿಯು ಹೊಟ್ಟೆಗೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಹಾಗಲಕಾಯಿಗೆ ಕಹಿ ರುಚಿಯೇ ಇರುವುದಿಲ್ಲ ಎಂಬುದು ಹಾಗಲಕಾಯಿ ಪ್ರಿಯರ ವಾದ.
ಹಾಗಲಕಾಯಿ ಹಲವು ಬಣ್ಣ ಮತ್ತು ಗಾತ್ರಗಳಲ್ಲಿ ಬರುತ್ತದೆ. ಅದರ ಗಾತ್ರ ಮತ್ತು ಉದ್ದವು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಮಾಹಿತಿಯ ಪ್ರಕಾರ ಹಾಗಲಕಾಯಿ ಮೊದಲು ಕಂಡುಬಂದಿದ್ದು ಆಫ್ರಿಕಾದಲ್ಲಿ. ಅಲ್ಲಿಂದ ಇದು ಏಷ್ಯಾಕ್ಕೆ ಬಂದಿತು. ಬೇಸಿಗೆಯಲ್ಲಿ ಆಫ್ರಿಕಾದಲ್ಲಿ ಕುಂಗ್ ಬೇಟೆಗಾರರ ಮುಖ್ಯ ಆಹಾರವಾಗಿತ್ತು. ಕಾಲಕ್ರಮೇಣ ಇದರ ಪ್ರಯೋಜನಗಳು ತಿಳಿಯುತ್ತಿದ್ದಂತೆ ಬೇರೆ ಬೇರೆ ದೇಶಕ್ಕೂ ಪರಿಚಿತವಾಯಿತು.
ಹಾಗಲಕಾಯಿಯಲ್ಲಿ ಮೊಮೊರ್ಟಿಸಿನ್ ಎಂಬ ವಿಶೇಷ ಗ್ಲೈಕೋಸೈಡ್ ಇದೆ. ಅದರ ರುಚಿ ಕಹಿಯಾಗಿದೆ. ಹಾಗಾಗಿಯೇ ಹಾಗಲಕಾಯಿಯ ರುಚಿ ಕಹಿ. ಇದೇ ಅಂಶಗಳು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿವೆ. ಇದು ಹೊಟ್ಟೆಯಲ್ಲಿ ಜೀರ್ಣಕಾರಿ ರಸದ ಸ್ರವಿಸುವಿಕೆಯನ್ನು ಸಕ್ರಿಯಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗ್ಯಾಸ್‌ನಂತಹ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
ಹಾಗಲಕಾಯಿಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ಫೈಬರ್, ವಿಟಮಿನ್ ಎ, ಬಿ1 ಬಿ2, ಸಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸತು ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಕಂಡುಬರುತ್ತವೆ. ಈ ಪೋಷಕಾಂಶಗಳು ಹೊಟ್ಟೆಯ ಹುಳುಗಳು ಮತ್ತು ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಅನಗತ್ಯ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.