ತೂಕ ವಿಪರೀತ ಹೆಚ್ಚಾಗುವುದು ಅನೇಕ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ. ತೂಕ ಹೆಚ್ಚಾದಾಗ ಅದರೊಂದಿಗೆ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ, ಹಲವು ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ಹೆಚ್ಚುತ್ತಿರುವ ತೂಕದ ಜೊತೆಗೆ, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್ ಮುಂತಾದ ಅನೇಕ ಕಾಯಿಲೆಗಳು ಕಾಡಲಾರಂಭಿಸುತ್ತವೆ. ವ್ಯಾಯಾಮ ಹಾಗೂ ಆಹಾರ ನಿಯಂತ್ರಣದ ಬಳಿಕವೂ ತೂಕ ಹೆಚ್ಚುತ್ತಲೇ ಇದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಏಕೆಂದರೆ ನಿರಂತರ ತೂಕ ಹೆಚ್ಚಾಗುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಇನ್ನು ತೂಕ ಹೆಚ್ಚಳದೊಂದಿಗೆ ದೇಹದ ಅನೇಕ ಭಾಗಗಳಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕುತ್ತಿಗೆ, ಪೃಷ್ಠದ ಭಾಗ, ತೊಡೆಗಳು, ಕೈಗಳು ದಪ್ಪಗಾಗುವುದು ಸಹಜ. ಅದೇ ರೀತಿ ತೂಕ ಹೆಚ್ಚಾದಂತೆ ಸ್ತನದ ಗಾತ್ರವೂ ಹೆಚ್ಚಾಗತೊಡಗುತ್ತದೆ.
ತೂಕ ಏರಿಕೆಯಿಂದ ಹಾರ್ಮೋನ್ ಬದಲಾವಣೆಗಳು ಸಂಭವಿಸುತ್ತವೆ. ಹಾರ್ಮೋನ್ ಬದಲಾವಣೆಯಿಂದ ಕೂಡ ಸ್ತನಗಳ ಗಾತ್ರವೂ ಹೆಚ್ಚಾಗಬಹುದು. ಹಾಗಾಗಿ ನಮ್ಮ ಒಟ್ಟಾರೆ ತೂಕ, ಬೊಜ್ಜು ಮತ್ತು ಸ್ತನಗಳ ಗಾತ್ರಕ್ಕೆ ನೇರ ಸಂಬಂಧವಿದೆ.