ಹೋಟೆಲ್ ನಲ್ಲಿ ಬಿಲ್ ಪಾವತಿಸಿದ ನಂತರ ಸೋಂಪು ಕೊಡುವುದು ವಾಡಿಕೆ. ಊಟದ ಕೊನೆಯಲ್ಲಿ ಸೋಂಪು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ಇದರ ಉದ್ದೇಶ. ಸೋಂಪು ಜಗಿದಾಗ ಸ್ವಲ್ಪ ಸಿಹಿ, ನಂತರ ಸ್ವಲ್ಪ ಕಹಿ ಮಿಶ್ರಿತ ಒಗರು ರುಚಿ ಅನುಭವವಾಗುತ್ತದೆ.
ಸೋಂಪು ಕೇವಲ ಜೀರ್ಣಕ್ರಿಯೆಯನ್ನು ವೃದ್ದಿಸುವುದಷ್ಟೆ ಅಲ್ಲ, ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುತ್ತದೆ. ಪ್ರವಾಸದ ಸಮಯದಲ್ಲಿ ಕಾಡುವ ವಾಕರಿಕೆ ಸಮಸ್ಯೆಗೂ ಸೋಂಪು ರಾಮಬಾಣ.
ಅಷ್ಟೇ ಅಲ್ಲದೇ ಹಸಿವನ್ನು ಚುರುಕುಗೊಳಿಸಿ, ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಅಜೀರ್ಣದಿಂದ ಉಂಟಾಗುವ ವಾಯು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗೆ ಸೋಂಪು ಶಮನಕಾರಿ. ಇನ್ನೂ ಜೀರ್ಣಕ್ರಿಯೆ ಸರಿಯಾದರೆ ಮಲಬದ್ಧತೆಯಂತಹ ಸಮಸ್ಯೆಯಿಂದಲೂ ಮುಕ್ತಿ.
ಕೇವಲ ಐದಾರು ಕಾಳು ಜಗಿಯುವುದರಿಂದ ಇಷ್ಟೆಲ್ಲಾ ಪ್ರಯೋಜನ ಇದೆ ಅಂದಮೇಲೆ ಹೋಟೆಲ್ ನಲ್ಲಿ ಅಷ್ಟೇ ಅಲ್ಲ, ಮನೆಯಲ್ಲೂ ಊಟದ ನಂತರ ಸೋಂಪು ಜಗಿಯುವುದನ್ನು ಮರೆಯಬೇಡಿ.