ನಿಮಗೆ ತಿಳಿದಿರುವಂತೆ, ಭಾರತಕ್ಕೆ ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಸಿಕ್ಕಿತು. ಆದರೆ ಆ ಸಂದರ್ಭದಲ್ಲಿ ದೇಶಕ್ಕೆ ಶಾಶ್ವತ ಸಂವಿಧಾನ ಇರಲಿಲ್ಲ ಬ್ರಿಟಿಷ್ ಭಾರತ ಸರ್ಕಾರದ ಕಾಯಿದೆಯ (1935) ಕಾನೂನುಗಳನ್ನೆ ಆಧರಿಸಿ ಆಡಳಿತ ನಡೆಯುತ್ತಿತ್ತು. 29 ಆಗಸ್ಟ್ 1947 ರಂದು, ಶಾಶ್ವತ ಸಂವಿಧಾನವನ್ನು ರಚಿಸಲು ಕರಡು ಸಮಿತಿಯನ್ನು ನೇಮಿಸಲಾಯಿತು, ಡಾ ಬಿ.ಆರ್. ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು.
ನವೆಂಬರ್ 26, 1949 ರಂದು, ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ನವೆಂಬರ್ 26 ಅನ್ನು ಪ್ರತಿ ವರ್ಷ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 26, 1950 ರಂದು ಭಾರತೀಯ ಸಂವಿಧಾನವು ಜಾರಿಗೆ ಬಂದಿತು. ಈ ದಿನವನ್ನು ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಭಾರತವು ಸಂಪೂರ್ಣ ಸಾರ್ವಭೌಮ ಗಣರಾಜ್ಯವಾಗಿ ಪರಿವರ್ತನೆಗೊಂಡ ದಿನವೆಂದು ಗುರುತಿಸಲಾಗಿದೆ.
ಜನವರಿ 26, 1950 ರಂದು, ಡಾ ರಾಜೇಂದ್ರ ಪ್ರಸಾದ್ ಅವರು ಭಾರತೀಯ ಒಕ್ಕೂಟದ ಅಧ್ಯಕ್ಷರಾಗಿ ತಮ್ಮ ಮೊದಲ ಅಧಿಕಾರಾವಧಿಯನ್ನು ಪ್ರಾರಂಭಿಸಿದರು ಮತ್ತು ಸಂವಿಧಾನ ಸಭೆಯು ಭಾರತದ ಸಂಸತ್ತಾಗಿ ಬದಲಾಯಿತು.
ಜನವರಿ 26 ರಂದು ಗಣರಾಜ್ಯೋತ್ಸವವನ್ನು ಏಕೆ ಆಚರಿಸಲಾಗುತ್ತದೆ ?
ಜನವರಿ 26 ಅನ್ನು ಗಣರಾಜ್ಯೋತ್ಸವದ ದಿನಾಂಕವಾಗಿ ಆಯ್ಕೆ ಮಾಡಲಾಯಿತು. ಏಕೆಂದರೆ 1930 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ದಿನದಂದೆ ಪೂರ್ಣ ಸ್ವರಾಜ್ಯದ ಘೋಷಣೆ ಮಾಡಿದ್ದು. ತಮ್ಮ ಸರ್ಕಾರವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲು ಭಾರತೀಯ ನಾಗರಿಕರಿಗೆ ನೀಡಿ ಸಬಲೀಕರಣವನ್ನು ಈ ದಿನ ಸ್ಮರಿಸುತ್ತದೆ.