ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ವಾಕರಿಕೆ ಸಾಮಾನ್ಯ. ಬಹುತೇಕ ಪ್ರತಿ ಮಹಿಳೆಯೂ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆಯಿಂದ ಬಳಲುತ್ತಾರೆ. ಇದನ್ನು ಮಾರ್ನಿಂಗ್ ಸಿಕ್‌ನೆಸ್ ಎಂದೂ ಕರೆಯಲಾಗುತ್ತದೆ.
ಬೆಳಗ್ಗೆ ಗರ್ಭಿಣಿಯರಿಗೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿ ಅನೇಕರು ಬೆಳಗ್ಗೆ ಏನನ್ನೂ ತಿನ್ನುವುದಿಲ್ಲ. ವಾಂತಿಯಾಗುತ್ತದೆ ಎಂಬ ಕಾರಣಕ್ಕೆ ಆಹಾರ ಸೇವಿಸಲು ಹಿಂಜರಿಯುತ್ತಾರೆ. ಕೆಲವು ಮಹಿಳೆಯರು ಗರ್ಭಾವಸ್ಥೆಯ ಆರಂಭದಲ್ಲಿ ಮೂರು ತಿಂಗಳವರೆಗೆ ಸರಿಯಾಗಿ ಊಟ-ಉಪಹಾರ ಮಾಡುವುದಿಲ್ಲ. ಅವರಿಗೆ ಯಾವ ಆಹಾರವನ್ನು ನೋಡಿದರೂ ವಾಕರಿಕೆ ಮತ್ತು ವಾಂತಿ ಬಂದಂತಾಗುತ್ತದೆ. ಕೆಲವರು ಆಹಾರದ ಪರಿಮಳ ಕೇಳಿಯೂ ವಾಂತಿ ಮಾಡಿಕೊಳ್ಳುತ್ತಾರೆ.
ಗರ್ಭಾವಸ್ಥೆಯಲ್ಲಿ ಆಹಾರವನ್ನು ನೋಡಿದಾಗ ವಾಂತಿಯಾಗುವುದೇಕೆ ?
ಸಂಶೋಧನೆಯ ಪ್ರಕಾರ ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಕಾಡುವ ಮಾರ್ನಿಂಗ್ ಸಿಕ್‌ನೆಸ್ ಕೆಲವು ಪ್ರಯೋಜನಗಳನ್ನು ಸಹ ಹೊಂದಿದೆ. ಇದು ಗರ್ಭಿಣಿ ಮಹಿಳೆಯರ ದೇಹದ ರಕ್ಷಣಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ತಾಯಿ ಮತ್ತು ಮಗುವಿಗೆ ಹಾನಿಕಾರಕವಾದ ಆಹಾರದ ವಾಸನೆಯನ್ನು ತಿರಸ್ಕರಿಸುತ್ತದೆ. ಆಹಾರವನ್ನು ನೋಡಿದರೆ ಅಥವಾ ವಾಸನೆಯನ್ನು ನೋಡಿದಾಗ ವಾಕರಿಕೆ ಬರಲು ಇದೇ ಕಾರಣ.
ವಾಂತಿ ಮತ್ತು ವಾಕರಿಕೆ ಗರ್ಭಪಾತಕ್ಕೆ ಸಂಬಂಧಿಸಿದೆಯೇ ?
ಮತ್ತೊಂದು ಅಧ್ಯಯನದ ಪ್ರಕಾರ ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ವಾಂತಿ ಅಥವಾ ವಾಕರಿಕೆ ಮುಂತಾದ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರಿಗೆ ಗರ್ಭಪಾತ ಮತ್ತು ಹೆರಿಗೆಯ ಸಮಸ್ಯೆಗಳು ಕಡಿಮೆ. ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆಯು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇದು ಪ್ರತಿ ಮಹಿಳೆಯ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ.
ಬೆಳಗಿನ ಬೇನೆ ಎಂದರೇನು ?
ಬೆಳಗಿನ ಬೇನೆಯು ಗರ್ಭಧಾರಣೆಯ ಮೊದಲ ಲಕ್ಷಣಗಳು ಮತ್ತು ಚಿಹ್ನೆಗಳಲ್ಲಿ ಒಂದು. ಗರ್ಭಧಾರಣೆಯ ಸುಮಾರು 6 ವಾರಗಳ ನಂತರ ಮಹಿಳೆಯರಿಗೆ ಮಾರ್ನಿಂಗ್ ಸಿಕ್‌ನೆಸ್ ಬರುತ್ತದೆ. ಬೆಳಗಿನ ಬೇನೆ ಮತ್ತು ವಾಕರಿಕೆಯ ಲಕ್ಷಣಗಳು ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಕಡಿಮೆಯಾಗುತ್ತವೆ. ಆದಾಗ್ಯೂ ಕೆಲವು ಮಹಿಳೆಯರಲ್ಲಿ ಇದು ಹೆರಿಗೆ ಸಮಯದವರೆಗೂ ಇರಬಹುದು. ಇದನ್ನು ಹೈಪರೆಮೆಸಿಸ್ ಗ್ರಾವಿಡಾರಮ್ ಎಂದೂ ಕರೆಯುತ್ತಾರೆ.