
ಕುಂಭಮೇಳ, ಮಾಘಮೇಳ ಇಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ನಾಗಾ ಸಾಧುಗಳು ಕಾಣಸಿಗುತ್ತಾರೆ. ನಾಗಾ ಸಾಧುಗಳ ಜೀವನ ಸಾಕಷ್ಟು ನಿಗೂಢವಾಗಿದೆ. ಹಾಗಾಗಿ ಋಷಿಮುನಿಗಳ ಮತ್ತು ಸಂತರ ಈ ಸಮುದಾಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಹಜ.
ವಿಶೇಷ ಸಂದರ್ಭಗಳಲ್ಲಿ ಕಾಣಸಿಗುವ ನಾಗಾ ಸಾಧುಗಳು ಕುಂಭಮೇಳದ ನಂತರ ಎಲ್ಲಿ ಹಠಾತ್ತನೆ ಕಣ್ಮರೆಯಾಗುತ್ತಾರೆ ಎಂಬುದು ಕೂಡ ಯೋಚಿಸಬೇಕಾದ ಸಂಗತಿ. ಏಕೆಂದರೆ ನಾಗಾ ಸಾಧುಗಳು ಪವಿತ್ರ ನದಿಗಳು ಅಥವಾ ಯಾತ್ರಾ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಕಾಣಸಿಗುವುದಿಲ್ಲ.
ನಾಗಾ ಸಾಧುಗಳು ಎಲ್ಲಿ ವಾಸಿಸುತ್ತಾರೆ? ಏನನ್ನು ತಿನ್ನುತ್ತಾರೆ? ಹೇಗೆ ಬದುಕುತ್ತಾರೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ತಿಳಿದಿಲ್ಲ. ನಾಗಾ ಸಾಧುಗಳ ಪ್ರಪಂಚವು ಸಾಕಷ್ಟು ಗುಪ್ತ ಮತ್ತು ನಿಗೂಢವಾಗಿದೆ.
ದೇಹದಾದ್ಯಂತ ಭಸ್ಮದ ಪಟ್ಟೆಗಳು, ಬೃಹತ್ ಜಡೆ ಕೂದಲಿನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಳ್ಳುವ ನಾಗಾಸಾಧುಗಳು ದೇವರ ಭಕ್ತಿಯಲ್ಲಿ ಮುಳುಗಿರುತ್ತಾರೆ. ಸಾಮಾನ್ಯವಾಗಿ ಪರ್ವತಗಳು, ಕಾಡು, ಗುಹೆ ಅಥವಾ ಪ್ರಾಚೀನ ದೇವಾಲಯಗಳಲ್ಲಿ ವಾಸಿಸುತ್ತಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರದೇ ಇರುವ ಸ್ಥಳಗಳಲ್ಲಿಯೇ ಅವರು ನೆಲೆಸುತ್ತಾರೆ. ಬೆತ್ತಲೆಯಾಗಿಯೇ ಇರುವ ನಾನಾಬಾಬಾಗಳು ಹೆಚ್ಚಿನ ಸಮಯ ತಪಸ್ಸಿನಲ್ಲಿ ಮುಳುಗಿರುತ್ತಾರೆ.
ಕಾಡಿನಲ್ಲಿ ಸಿಗುವ ಗಡ್ಡೆ-ಗೆಣಸುಗಳನ್ನು ತಿನ್ನುತ್ತಾರೆ. ಭಿಕ್ಷೆ ಬೇಡಿ ಕೂಡ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ವಿಶೇಷ ಎಂದರೆ ನಾಗಾಸಾಧುಗಳು ದೀರ್ಘಕಾಲದವರೆಗೆ ಹಸಿದುಕೊಂಡು ಇರಬಲ್ಲರು. ಅವರು ಪ್ರಪಂಚದ ಮುಂದೆ ಬರಲು ಇಷ್ಟಪಡುವುದಿಲ್ಲ. ಆದ್ದರಿಂದ ಕಾಡಿನ ಮಾರ್ಗಗಳ ಮೂಲಕ ಕಾಲ್ನಡಿಗೆಯಲ್ಲಿ ತೆರಳುತ್ತಾರೆ ಮತ್ತು ಸಾಮಾನ್ಯವಾಗಿ ಹಗಲಿನ ಬದಲು ರಾತ್ರಿ ಪ್ರಯಾಣಿಸುತ್ತಾರೆ.
ನಾಗಾ ಸಾಧುಗಳು ಯಾವುದೇ ರೀತಿಯ ಆರಾಮದಾಯಕ ವಸ್ತುಗಳನ್ನು ಬಳಸುವುದಿಲ್ಲ. ನೆಲದ ಮೇಲೆ ಮಲಗುತ್ತಾರೆ. ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತಾರೆ. ಹೆಚ್ಚಿನ ಸಮಯವನ್ನು ದೇವರ ಪೂಜೆಯಲ್ಲಿ ಕಳೆಯುತ್ತಾರೆ. ತನ್ನ ಸಹಚರರು ಕಳುಹಿಸುವ ಸಂದೇಶಗಳನ್ನು ಸ್ವೀಕರಿಸುವಷ್ಟು ನಿಗೂಢ ಜ್ಞಾನ ಅಥವಾ ಶಕ್ತಿ ಅವರಲ್ಲಿದೆ ಎಂದು ಹೇಳಲಾಗುತ್ತದೆ.