ಅಕ್ಟೋಬರ್ ಹಾಗೂ ನವೆಂಬರ್ ತಿಂಗಳು ಬಂದ್ರೆ ಸಾಕು ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗ್ತಾರೆ. ತಂಪಾದ ಗಾಳಿ, ಹವಾಮಾನದಲ್ಲಿನ ಬದಲಾವಣೆಯೇ ಋತುಮಾನದ ಕಾಯಿಲೆಗಳಿಗೆ ಕಾರಣ ಎಂಬುದು ನಂಬಿಕೆ. ಹವಾಮಾನದಲ್ಲಿನ ಬದಲಾವಣೆಗಳು ರೋಗದ ಹೆಚ್ಚಳಕ್ಕೆ ಕಾರಣವಾಗುತ್ತವೆ. ಆದರೆ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಕಾಡುವ ಅನಾರೋಗ್ಯಕ್ಕೆ ತಾಪಮಾನದಲ್ಲಿನ ಕುಸಿತವೊಂದೇ ಕಾರಣವಲ್ಲ.
ವಿಟಮಿನ್ ಡಿ ಕೊರತೆ – ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ದಿನಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ನಾವು ಹೆಚ್ಚು ಸಮಯ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ವಿಟಮಿನ್ ಡಿ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಮುಖ್ಯ. ವಿಟಮಿನ್ ಡಿ ಕೊರತೆಯಿಂದ ಈ ಅವಧಿಯಲ್ಲಿ ಹೆಚ್ಚು ವೈರಲ್ ಸೋಂಕುಗಳಿಗೆ ತುತ್ತಾಗುತ್ತೇವೆ.
ಒಳಾಂಗಣ ವಾಸ – ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ತಂಪಾದ ಗಾಳಿ ಬೀಸುತ್ತದೆ. ಜನರು ಹೊರಗೆ ಹೆಚ್ಚು ಸಮಯ ಕಳೆಯುವುದಿಲ್ಲ. ಬಹುತೇಕ ಮನೆಯಲ್ಲೇ ಇರಲು ಇಷ್ಟಪಡುತ್ತಾರೆ. ಅನೇಕ ಜನರು ಒಟ್ಟಿಗೆ ಸಂಪರ್ಕಕ್ಕೆ ಬರುವುದರಿಂದ ವೈರಸ್ ಬೇಗ ಹರಡುತ್ತದೆ.
ಸೊಳ್ಳೆಗಳ ಸಂತಾನೋತ್ಪತ್ತಿ– ಮಳೆಗಾಲದ ನಂತರ ಹವಾಮಾನವು ಬದಲಾಗುತ್ತದೆ. ಅನೇಕ ಸ್ಥಳಗಳಲ್ಲಿ ನೀರು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದು ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾವನ್ನು ಉಂಟುಮಾಡುವ ಸೊಳ್ಳೆಗಳಿಗೆ ಪರಿಪೂರ್ಣ ಸಂತಾನೋತ್ಪತ್ತಿಯ ಸ್ಥಳವನ್ನು ಸೃಷ್ಟಿಸುತ್ತದೆ. ಅಕ್ಟೋಬರ್-ನವೆಂಬರ್ ವೇಳೆಗೆ ಈ ಸೊಳ್ಳೆಗಳ ಸಂಖ್ಯೆಯು ತುಂಬಾ ಹೆಚ್ಚಾಗುತ್ತದೆ. ಇದರಿಂದಾಗಿ ರೋಗವು ಹರಡುತ್ತದೆ.
ನಿರ್ಲಕ್ಷ್ಯ – ಈ ಋತುವಿನಲ್ಲಿ ಸೆಖೆ ಕಡಿಮೆ. ವಿಪರೀತ ಶೀತದ ಅನುಭವವೂ ಇರುವುದಿಲ್ಲ. ಹಾಗಾಗಿ ಜನರು ತಾಪಮಾನದ ಬಗ್ಗೆ ಅಸಡ್ಡೆ ತೋರುತ್ತಾರೆ. ಬೆಳಗ್ಗೆ ಮತ್ತು ತಡರಾತ್ರಿಯ ಸಮಯದಲ್ಲಿ ಬೆಚ್ಚನೆಯ ಬಟ್ಟೆ ಧರಿಸುವುದಿಲ್ಲ. ಕಡಿಮೆ ತಾಪಮಾನದಲ್ಲಿ ಸ್ನಾನ ಮಾಡುತ್ತಾರೆ. ಈ ಎಲ್ಲಾ ಕಾರಣಗಳಿಂದಲೂ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.