ಬೆಂಗಳೂರು : ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ದೇಶವ್ಯಾಪ್ತಿ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ‘ಸತ್ಯಶೋಧನೆ ತಂಡ’ ಭೇಟಿ ನೀಡಿದೆ. ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ.
ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದಾಗ ನಿಮ್ಮ ‘ಸತ್ಯಶೋಧನೆ ತಂಡ’ ಯಾಕೆ ಹೋಗಲಿಲ್ಲ..? ಎಂದು ಜೆ.ಪಿ ನಡ್ಡಾ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
”ಬೆಳಗಾವಿಯ ಮಹಿಳೆಯ ಬೆತ್ತಲೆ ಪ್ರಕರಣದಲ್ಲಿ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಸಂತ್ರಸ್ತ ಮಹಿಳೆಗೆ 5 ಲಕ್ಷ ಪರಿಹಾರ ನೀಡಿದೆ. ಸಂತ್ರಸ್ತೆಯ ರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಬದ್ದವಾಗಿದೆ.” ಎಂದು ಕಾಂಗ್ರೆಸ್ ಹೇಳಿದೆ.
ಜೆಪಿ ನಡ್ಡಾ ಅವರೇ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದಾಗ ನಿಮ್ಮ ಸತ್ಯಶೋಧನೆ ತಂಡ ಹೋಗಲಿಲ್ಲವೇಕೆ? ಉತ್ತರ ಪ್ರದೇಶದ ದಲಿತರ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ಸತ್ಯಶೋಧನೆ ಮಾಡಲಿಲ್ಲವೇಕೆ? ಮಧ್ಯಪ್ರದೇಶದಲ್ಲಿ ಬಾಲಕಿಯನ್ನು ಅತ್ಯಾಚಾರವೆಸಗಿ ಬೆತ್ತಲೆ ಮಾಡಿ ರಸ್ತೆಗೆ ಅಟ್ಟಿದಾಗ ಹೋಗಲಿಲ್ಲವೇಕೆ? ಹತ್ರಾಸ್ ನಲ್ಲಿ ಬಿಜೆಪಿ ಶಾಸಕನೇ ಅತ್ಯಾಚಾರ ಮಾಡಿದಾಗ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗ ನಿಮಗೆ ಮಹಿಳೆಯರ ಬಗ್ಗೆ ಕಾಳಜಿ ಹುಟ್ಟಲಿಲ್ಲ ಏಕೆ? ಅಲ್ಲೆಲ್ಲಾ ಇದ್ದಿದ್ದು ನಿಮ್ಮದೇ ಸರ್ಕಾರ ಎಂಬ ಕಾರಣಕ್ಕೆ, ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸತ್ಯಶೋಧನೆ ಮಾಡುವ ಮನಸಾಗಲಿಲ್ಲವೇ? ಸಂಸತ್ ದಾಳಿ ಪ್ರಕರಣದಿಂದ ಪ್ರತಾಪ್ ಸಿಂಹನನ್ನು ರಕ್ಷಿಸಲು ಈಗ ಸದಾರಮೆ ನಾಟಕ ಶುರು ಮಾಡಿದ ಬಿಜೆಪಿಗೆ ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲ! ಎಂದು ಕಾಂಗ್ರೆಸ್ ಕುಟುಕಿದೆ.