ಭಗವಾನ್ ಶ್ರೀಕೃಷ್ಣನಿಗೆ ಕೊಳಲು ಬಹಳ ಪ್ರಿಯವಾದ ವಸ್ತು. ಕೃಷ್ಣ ಸದಾ ಕೊಳಲನ್ನು ತನ್ನ ಬಳಿ ಇಟ್ಟುಕೊಳ್ಳುತ್ತಾನೆ. ಮುರುಳಿ ಲೋಲನ ಕೊಳಲಿನ ನಾದ ಕೇಳಿ ಇಡೀ ಜಗತ್ತೇ ಭಕ್ತಿಮಯವಾಗುತ್ತಿತ್ತು. ಆದರೆ ಅದೊಂದು ದಿನ ಶ್ರೀಕೃಷ್ಣ ತನ್ನ ಪ್ರೀತಿಯ ಕೊಳಲನ್ನು ಮುರಿದು ಹಾಕಿದ.
ಶ್ರೀಕೃಷ್ಣನ ಕೊಳಲನ್ನು ಪ್ರೀತಿ, ಸಂತೋಷ ಮತ್ತು ಆಕರ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಕೊಳಲಿನ ಹೆಸರು ಮಹಾನಂದ ಅಥವಾ ಸಮ್ಮೋಹಿನಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಶಿವನು ಶ್ರೀಕೃಷ್ಣನ ಕೊಳಲನ್ನು ಮಹರ್ಷಿ ದಧೀಚಿಯ ಮೂಳೆಗಳಿಂದ ರಚಿಸಿದನು. ಶಿವನು ಬಾಲಕೃಷ್ಣನನ್ನು ಭೇಟಿಯಾಗಲು ಬಂದಾಗ, ಈ ಕೊಳಲನ್ನು ಅವನಿಗೆ ಉಡುಗೊರೆಯಾಗಿ ನೀಡಿದ್ದ.
ಕಂಸನನ್ನು ಕೊಂದ ನಂತರ ಶ್ರೀಕೃಷ್ಣನು ರುಕ್ಮಿಣಿಯನ್ನು ಮದುವೆಯಾಗಿ ದ್ವಾರಕೆಯಲ್ಲಿ ನೆಲೆಸಲು ಹೋದನು. ರುಕ್ಮಿಣಿ ದೇವರ ಸೇವೆಯಲ್ಲಿ ಸದಾ ನಿರತಳಾಗಿರುತ್ತಿದ್ದಳು. ಶ್ರೀಕೃಷ್ಣನ ಮನಸ್ಸಿನಲ್ಲಿ ಆಗಲೂ ರಾಧೆಯ ಬಗ್ಗೆ ಅಪಾರ ಪ್ರೀತಿ ತುಂಬಿತ್ತು. ತನ್ನ ಮನಸ್ಸಿನಿಂದ ರಾಧೆಯನ್ನು ಎಂದಿಗೂ ತೆಗೆದುಹಾಕಲು ಆಗಲೇ ಇಲ್ಲ. ಭಗವಾನ್ ಕೃಷ್ಣನು ತನ್ನ ಜೀವನದುದ್ದಕ್ಕೂ ಎಲ್ಲಾ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದನು.
ಜೀವನದ ಕೊನೆಯ ಕ್ಷಣಗಳಲ್ಲಿ ರಾಧೆಯೊಂದಿಗೆ ಮತ್ತೆ ಸೇರಿಕೊಂಡನು ಎಂದು ನಂಬಲಾಗಿದೆ.ಈ ಸಮಯದಲ್ಲಿ ಶ್ರೀಕೃಷ್ಣನು ರಾಧೆಯ ಇಚ್ಛೆಯೇನೆಂದು ಕೇಳಿದ್ದ. ಆಕೆ ಕೊಳಲ ನಾದವನ್ನು ಆಲಿಸುವ ಬಯಕೆಯನ್ನು ವ್ಯಕ್ತಪಡಿಸಿದಳು. ಕೊಳಲಿನ ನಾದ ಕೇಳುತ್ತಲೇ ರಾಧೆ ತನ್ನ ದೇಹವನ್ನು ತೊರೆದಳು ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನು ರಾಧೆಯ ಅಗಲಿಕೆಯನ್ನು ಸಹಿಸಲಾರದೆ ತನ್ನ ಕೊಳಲನ್ನೇ ಒಡೆದು ಹಾಕಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.