ಕ್ಯಾನ್ಸರ್ ತುಂಬಾ ಅಪಾಯಕಾರಿ ಕಾಯಿಲೆ, ಅದು ಪ್ರಾಣಕ್ಕೇ ಮಾರಕವಾಗಬಹುದು. ಅಥವಾ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಅನೇಕ ಸೆಲೆಬ್ರಿಟಿಗಳು ಕೂಡ ಕ್ಯಾನ್ಸರ್ ಜೊತೆಗೆ ಹೋರಾಡಿ ಗೆದ್ದಿದ್ದಾರೆ. ನಟಿ ಸೋನಾಲಿ ಬೇಂದ್ರೆ, ಮನಿಶಾ ಕೊಯಿರಾಲಾ, ಲೀಸಾ ರೇ, ಕ್ರಿಕೆಟಿಗ ಯುವರಾಜ್ ಸಿಂಗ್, ತಾಹಿರಾ ಕಶ್ಯಪ್ ಕೂಡ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದಾರೆ. ಇದೀಗ ಕಿರುತೆರೆ ನಟಿ ಹೀನಾ ಖಾನ್ ಕೂಡ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದುಕೊಳ್ತಿದ್ದಾರೆ. ಸಾಮಾನ್ಯವಾಗಿ ಚಿಕಿತ್ಸೆಯ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳ ಕೂದಲನ್ನು ಬೋಳಿಸಲಾಗುತ್ತದೆ. ಇದ್ಯಾಕೆ ಎಂಬುದನ್ನು ತಿಳಿಯೋಣ.
ತಲೆಕೂದಲು ನಮ್ಮ ಸೌಂದರ್ಯಕ್ಕೆ ಕಳಸವಿಟ್ಟಂತೆ. ನಮ್ಮ ಐಡೆಂಟಿಟಿ ಕೂಡ. ಹಾಗಾಗಿ ಪ್ರತಿಯೊಬ್ಬರೂ ಕೂದಲಿನ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಆದರೆ ಕ್ಯಾನ್ಸರ್ ಸಂದರ್ಭದಲ್ಲಿ ಅದನ್ನು ತೆಗೆದುಹಾಕಲೇಬೇಕು. ಕ್ಯಾನ್ಸರ್ ರೋಗನಿರ್ಣಯವಾದ ತಕ್ಷಣ ಚಿಕಿತ್ಸೆಗಾಗಿ ರೋಗಿಯ ಕೂದಲನ್ನು ಚಿಕ್ಕದಾಗಿ ಕತ್ತರಿಸಬೇಕಾಗುತ್ತದೆ. ಇದು ಅನೇಕರಿಗೆ ಸವಾಲಿನ ಕೆಲಸ. ಕೆಲವರು ಇದರಿಂದ ನೊಂದುಕೊಳ್ಳಲೂಬಹುದು.
ಕ್ಯಾನ್ಸರ್ ಚಿಕಿತ್ಸೆಗಾಗಿ ರೋಗಿಯು ಕೀಮೋಥೆರಪಿಗೆ ಒಳಗಾಗಬೇಕಾಗುತ್ತದೆ. ಇದು ದೇಹದ ಅನೇಕ ಜೀವಕೋಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಆ ಸಮಯದಲ್ಲಿ ಕೂದಲು, ಚರ್ಮ, ಲೋಳೆಯ ಪೊರೆ ಮತ್ತು ರಕ್ತ ಕಣಗಳು ಪ್ರಭಾವಿತವಾಗುತ್ತವೆ. ಕೂದಲು ಕೂಡ ಉದುರಲಾರಂಭಿಸುತ್ತದೆ. ಕೂದಲು ಉದುರುವಿಕೆ ಶಾಶ್ವತವೂ ಆಗಿರಬಹುದು, ಅಥವಾ ತಾತ್ಕಾಲಿಕವೂ ಆಗಿರಬಹುದು. ಅದು ಕೀಮೋ ಔಷಧದ ಪ್ರಕಾರವನ್ನು ಅವಲಂಬಿಸಿರುತ್ತದೆ. ಕೀಮೋ ಏಜೆಂಟ್‌ಗೆ ಒಡ್ಡಿಕೊಂಡ 2 ರಿಂದ 3 ವಾರಗಳ ನಂತರ ಕೂದಲು ಉದುರುವುದು ಅಥವಾ ತೆಳುವಾಗುವುದು ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ.
ಹಾಗಾಗಿಯೇ ವೈದ್ಯರು ಕೂದಲನ್ನು ಸಂಪೂರ್ಣ ತೆಗೆದುಹಾಕಲು ಅಥವಾ ಚಿಕ್ಕದಾಗಿ ಕಟಿಂಗ್ ಮಾಡಲು ಸೂಚಿಸುತ್ತಾರೆ. ಇದರಿಂದ ಕ್ಯಾನ್ಸರ್ ರೋಗಿಗಳು ಕೂದಲು ಉದುರುವಿಕೆಗೆ ಮಾನಸಿಕವಾಗಿ ಸಿದ್ಧರಾಗಬಹುದು. ಕೂದಲನ್ನು ಕ್ಷೌರ ಮಾಡಿದ ನಂತರ ಅವರು ಒಂದು ರೀತಿಯಲ್ಲಿ ಕಿಮೊಥೆರಪಿಯ ಅಡ್ಡಪರಿಣಾಮಗಳನ್ನು ಸ್ವೀಕರಿಸುತ್ತಾರೆ. ನಂತರ ಕ್ಯಾನ್ಸರ್ ವಿರುದ್ಧ ಹೋರಾಡುವುದು ಸ್ವಲ್ಪ ಸುಲಭವಾಗುತ್ತದೆ.
ಇದು ರೋಗಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ರೋಗಿಗೆ ಸ್ವಯಂ ನಿಯಂತ್ರಣವನ್ನು ನೀಡುತ್ತದೆ. ಕೂದಲು ಉದುರುವುದು ತಾತ್ಕಾಲಿಕ ಸಮಸ್ಯೆ. ಚಿಕಿತ್ಸೆ ಮುಗಿದ ನಂತರ ಕೂದಲು ಮತ್ತೆ ಬೆಳೆಯಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಗೆ ಒಂದು ವರ್ಷವೇ ಬೇಕಾಗಬಹುದು.