ತಮ್ಮ ಲಸಿಕೆ ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ಒಪ್ಪಿಕೊಂಡ ಬಳಿಕ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. 2021 ರಲ್ಲಿ ವಿಶ್ವಾದ್ಯಂತ ವ್ಯಾಕ್ಸ್ ಜೆವ್ರಿಯಾ ಎಂದು ಮರುನಾಮಕರಣ ಮಾಡಿದ ಲಸಿಕೆಯನ್ನು ಬೇಡಿಕೆ ಕಡಿಮೆಯಾದ ಹಿನ್ನೆಲೆ ವಾಪಸ್ ಪಡೆಯುವುದಾಗಿ ಘೋಷಿಸಿದೆ.
ಕೆಲವು ಜನರಲ್ಲಿ ಲಸಿಕೆಯು ಟಿಟಿಎಸ್ ಎಂದು ಕರೆಯಲ್ಪಡುವ ಗಂಭೀರ ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ಕಂಪನಿಯು ನ್ಯಾಯಾಲಯದಲ್ಲಿ ಒಪ್ಪಿಕೊಂಡ ಕೆಲವು ದಿನಗಳ ನಂತರ ಈ ನಿರ್ಣಾಯಕ ನಿರ್ಧಾರವು ಹೊರಬಿದ್ದಿದೆ. ಅಸ್ಟ್ರಾಜೆನೆಕಾ ತನ್ನ ಯುರೋಪಿಯನ್ ಯೂನಿಯನ್ ಮಾರ್ಕೆಟಿಂಗ್ ಅನುಮತಿ ಹಿಂತೆಗೆದುಕೊಳ್ಳುವ ನಿರ್ಧಾರವನ್ನೂ ಪ್ರಕಟಿಸಿದೆ. ಸೋಮವಾರ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯು ಲಸಿಕೆಯನ್ನು ಇನ್ನು ಮುಂದೆ ಬಳಸಲು ಅನುಮತಿಸುವುದಿಲ್ಲ ಎಂದು ಸೂಚನೆ ನೀಡಿದೆ.
ಅನೇಕ ರೂಪಾಂತರದ ಕೋವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಹೆಚ್ಚು ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಅಸ್ಟ್ರಾಜೆನೆಕಾ ಲಸಿಕೆಗೆ ಬೇಡಿಕೆ ಇಳಿಕೆಯಾಗಿದೆ. ಹಾಗಾಗಿ ಇನ್ನು ಮುಂದೆ ಲಸಿಕೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ಎಂದಿದೆ.
ಅಂದಾಜಿನ ಪ್ರಕಾರ ಲಸಿಕೆ ಬಳಕೆಯ ಮೊದಲ ವರ್ಷದಲ್ಲಿಯೇ 6.5 ಮಿಲಿಯನ್ ಜೀವಗಳನ್ನು ಉಳಿಸಿದ್ದು ಜಾಗತಿಕವಾಗಿ 3 ಬಿಲಿಯನ್ ಡೋಸ್‌ಗಳನ್ನು ಪೂರೈಸಲಾಗಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
“ನಮ್ಮ ಪ್ರಯತ್ನಗಳನ್ನು ಪ್ರಪಂಚದಾದ್ಯಂತದ ಸರ್ಕಾರಗಳು ಗುರುತಿಸಿವೆ ಮತ್ತು ಜಾಗತಿಕವಾಗಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿರ್ಣಾಯಕ ಅಂಶವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ನಾವು ಈಗ ನಿಯಂತ್ರಕರು ಮತ್ತು ನಮ್ಮ ಪಾಲುದಾರರೊಂದಿಗೆ ಈ ಅಧ್ಯಾಯವನ್ನು ಮತ್ತು ಕೋವಿಡ್ -19 ಸಾಂಕ್ರಾಮಿಕಕ್ಕೆ ಮಹತ್ವದ ಕೊಡುಗೆಯನ್ನು ಮುಕ್ತಾಯಗೊಳಿಸಲು ಸ್ಪಷ್ಟವಾದ ಹಾದಿಯಲ್ಲಿ ಜೋಡಿಸಲು ಕೆಲಸ ಮಾಡುತ್ತೇವೆ” ಎಂದಿದೆ. ಸಂಸ್ಥೆ ಅಧಿಕೃತ ಪ್ರಕಟಣೆಗೂ ಮುನ್ನ ಈಗಾಗಲೇ ಇತರ ದೇಶಗಳು ಲಸಿಕೆ ಪೂರೈಕೆಯನ್ನು ನಿಲ್ಲಿಸಿವೆ.