ಸಾರಿಗೆ ಮತ್ತು ಆರ್ಥಿಕತೆಯ ವಿಷಯದಲ್ಲಿ ಭಾರತೀಯ ರೈಲ್ವೇ ದೇಶದ ಬೆನ್ನೆಲುಬು. ಜನರು ಸಾಮಾನ್ಯವಾಗಿ ವಿಮಾನಕ್ಕಿಂತ ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಯಾಕಂದ್ರೆ ಇದು ಬಜೆಟ್ ಫ್ರೆಂಡ್ಲಿ ಮತ್ತು ಹೆಚ್ಚಿನ ಆಯ್ಕೆಗಳಿರುತ್ತೆ. ಅದ್ರೆ ಈ ಎಲ್ಲಾ ಅನುಕೂಲಗಳ ಹೊರತಾಗಿಯು, ಭಾರತೀಯ ರೈಲ್ವೇಯಿಂದ ಅನಾನುಕೂಲಗಳು ಇದೆ. ಅದರಲ್ಲಿ ರೈಲುಗಳು ತಡವಾಗಿ ಬರುವುದು ಕೂಡ ಒಂದು.
ಇದಕ್ಕೆ ಮೂಲಸೌಕರ್ಯ ಸಮಸ್ಯೆಗಳು, ಹವಾಮಾನ ಸಮಸ್ಯೆಗಳು, ಭಾರೀ ಟ್ರಾಫಿಕ್, ತಾಂತ್ರಿಕ ದೋಷಗಳು ಮತ್ತು ಇತರ ಹಲವು ಕಾರಣಗಳು ಇದೆ. ಇನ್ನು ಗಮನಿಸಬೇಕಾದ ಅಂಶವೆಂದರೆ ಚಳಿಗಾಲದ ಸಮಯದಲ್ಲಿ ರೈಲುಗಳು ತಡವಾಗಿ ಬರುವುದು ಸಹ ಹೆಚ್ಚು.
ರೈಲು ತಡವಾಗಿ ಬರುವ ಈ ಸಮಸ್ಯೆಗೆ ಯಾವುದೇ ಪರಿಹಾರ ಇಲ್ವ ಎಂಬ ಬಗ್ಗೆ ಜನ ಸಾಕಷ್ಟು ಪ್ರಶ್ನೆ ಕೇಳಿದ್ದಾರೆ. ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಆದ Quoraದಲ್ಲಿ, ಕೆಲವು ಯೂಸರ್ಸ್ ರೈಲು ಯಾಕಾಗಿ ವಿಳಂಬವಾಗುತ್ತೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗಳು ಇದೀಗ ವೈರಲ್ ಆಗಿದೆ.
Quora ಎಂಬುದು ಮಾಧ್ಯಮ ಪೋರ್ಟಲ್ ಆಗಿದ್ದು, ಅಲ್ಲಿ ಸಾಮಾನ್ಯ ಜನರು ತಮ್ಮ ಪ್ರಶ್ನೆಗಳನ್ನು ಕೇಳುತ್ತಾರೆ. ನಂತರ ಇತರ ಬಳಕೆದಾರರು ಆ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅದೇ ರೀತಿ Quoraದಲ್ಲಿ ರೈಲು ಯಾಕೆ ತಡವಾಗುತ್ತೆ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಒಮ್ಮೆ ರೈಲು ತಡವಾದರೆ, ಅದು ಮತ್ತಷ್ಟು ವಿಳಂಬವಾಗುವುದು ಯಾಕೆ. ಈ ಸಂದರ್ಭದಲ್ಲಿ ರೈಲಿನ ವೇಗವನ್ನು ಹೆಚ್ಚಿಸುವ ಮೂಲಕ ಲೋಕೋ ಪೈಲೆಟ್ ಈ ವಿಳಂಬವನ್ನು ತಪ್ಪಿಸಬಹುದಲ್ಲಾ ಎಂದು ಬಳಕೆದಾರರು ಬರೆದಿದ್ದಾರೆ.
ಪ್ರತಿನಿತ್ಯ ಪ್ರಯಾಣಿಕರು ಗಮನಿಸುವ ಸಾಮಾನ್ಯ ಸಂಗತಿಯೆಂದರೆ, ರೈಲು ತಡವಾಗಿ ಬಂದರೆ, ಅದು ಮುಂದಿನ ನಿಲ್ದಾಣಗಳನ್ನು ತಡವಾಗಿ ರೀಚ್ ಆಗುತ್ತೆ. ಈ ಸಂದರ್ಭ ರೈಲಿನ ಲೋಕೋ ಪೈಲಟ್ ಕಳೆದುಹೋದ ಸಮಯವನ್ನು ಮ್ಯಾನೇಜ್ ಮಾಡಲು ಅದರ ವೇಗವನ್ನು ಏಕೆ ಹೆಚ್ಚಿಸಬಾರದು ಎಂದು ಜನ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಬಳಕೆದಾರರು ನೀಡಿದ ಕೆಲವು ಉತ್ತರಗಳನ್ನು ಈ ಕೆಳಗೆ ಇದೆ ಓದಿ.
ರೈಲು ಮತ್ತು ಬಸ್ ಅಥವಾ ಟ್ರಕ್ ಕಾರ್ಯಾಚರಣೆಗೆ ಸಾಕಷ್ಟು ವ್ಯತ್ಯಾಸವಿದೆ ಎಂದು ಉತ್ತಮ್ ಮಾಳವಿಯಾ ಎಂಬ ವ್ಯಕ್ತಿ ಹೇಳಿದ್ದಾರೆ. ಚಾಲಕನ ಇಚ್ಛೆಯಂತೆ ಬಸ್‌ಗಳು ಮತ್ತು ಟ್ರಕ್‌ಗಳಂತಹ ಇತರ ರೋಡ್ ಟ್ರಾನ್ಸ್‌ಪೋರ್ಟ್‌ಗಳ ವೇಗವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಆದ್ರೆ ರೈಲು ಎಷ್ಟು ವೇಗವಾಗಿ ಚಲಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಲಾಗುತ್ತದೆ. ಪ್ರತಿ ಸ್ಟೇಷನ್ ತಲುಪಬೇಕಾದ ಸರಿಯಾದ ಚಾರ್ಟ್ ಅನ್ನು ಸಹ ಪೈಲೆಟ್‌ಗೆ ನೀಡಲಾಗುತ್ತದೆ. ಈ ವೇಗದ ಮಿತಿಗೆ ಅನುಗುಣವಾಗಿ ಪೈಲೆಟ್ ರೈಲನ್ನು ಓಡಿಸಬೇಕು ಎಂದು ಮಾಳವಿಯಾ ಹೇಳಿದ್ದಾರೆ.
ಈ ಕಾರಣದಿಂದಾಗಿ, ಚಾಲಕನು ವೇಗವನ್ನು ಹೆಚ್ಚಿಸಲು ಬಯಸಿದರೂ ಸಹ ಈ ರೀತಿಯ ನಿರ್ಬಂಧಗಳಿಂದಾಗಿ ವೇಗ ಹೆಚ್ಚಿಸುವುದಕ್ಕೆ ಸಾಧ್ಯ ಆಗಲ್ಲ. ಒಂದು ವೇಳೆ ಲೋಕೋ ಪೈಲೆಟ್ ವೇಗದ ಮಿತಿಯನ್ನು ಉಲ್ಲಂಘಿಸಿದ್ರೆ ಭಾರತೀಯ ರೈಲ್ವೆ, ಚಾಲಕನಿಗೆ ದಂಡ ವಿಧಿಸುತ್ತೆ ಅಥವಾ ಅಮಾನತು ಸಹ ಮಾಡಬಹುದು. ಆದ್ದರಿಂದ, ರೈಲುಗಳ ನಿರಂತರ ವಿಳಂಬಕ್ಕೆ ಇದು ಒಂದು ಕಾರಣವಾಗಿರಬಹುದು ಎಂದು ಬರೆದಿದ್ದಾರೆ.
ಈ ರೀತಿಯ ವಿಳಂಬಕ್ಕೆ ಮತ್ತೊಂದು ಕಾರಣವನ್ನು ಸುಬ್ರಮಣ್ಯಂ ಎ.ವಿ. ಎಂಬವರು ನೀಡಿದ್ದಾರೆ. ಒಂದು ರೈಲ್ವೆ ಡಿವಿಜನ್ ಅನೇಕ ರೈಲುಗಳನ್ನು ನಿರ್ವಹಣೆ ಮಾಡುತ್ತೆ. ಆ ಎಲ್ಲಾ ರೈಲುಗಳ ಕಾರ್ಯಾಚರಣೆ ಮತ್ತು ಸಮಯಪಾಲನೆಯು ಆ ರೈಲ್ವೆ ಡಿವಿಜನ್‌ನ ಜವಾಬ್ದಾರಿಯಾಗಿದೆ. ಒಂದು ರೈಲ್ವೇ ಡಿವಿಜನ್‌ನ ನಿಲ್ದಾಣಕ್ಕೆ ಅದೇ ಡಿವಿಜನ್‌ನ ರೈಲಿನ ಜೊತೆಗೆ ಇನ್ನೊಂದು ಡಿವಿಜನ್‌ನ ರೈಲು ತಡವಾಗಿ ಬಂದರೆ, ಆ ಡಿವಿಜನ್‌ನ ರೈಲಿಗೆ ಮತ್ತು ನಂತರ ಇನ್ನೊಂದು ಡಿವಿಜನ್‌ನ ರೈಲಿಗೆ ಆದ್ಯತೆ ನೀಡಲಾಗುತ್ತೆ ಎಂದು ಸುಬ್ರಮಣ್ಯಂ ಎವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಯಾವುದೇ ಡಿವಿಜನ್‌ನಲ್ಲಿನ ಹವಾಮಾನ ಬದಲಾವಣೆ, ದುರಸ್ತಿ ಕಾರ್ಯ, ಸಿಗ್ನಲ್ ಸಮಸ್ಯೆ ಮತ್ತು ಇತರ ಅಂಶಗಳೂ ವಿಳಂಬಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.