ಇಡೀ ಭೂಮಿಯೆಲ್ಲಾ ತಮ್ಮದು ಎನ್ನುವ ಅಹಂ ಬಿಟ್ಟು, ಅನ್ಯ ಜೀವಿಗಳಿಗೂ ನಮ್ಮಂತೆಯೇ ಇಲ್ಲಿ ಜೀವಿಸಲು ನಮ್ಮಷ್ಟೇ ಹಕ್ಕಿದೆ ಎಂದು ಅರಿತು ಬಾಳುವ ಮನುಜರನ್ನು ನೋಡಿ ಕಲಿಯುವುದು ಬಹಳಷ್ಟಿದೆ.
ಅರಣ್ಯಗಳ ನಡುವೆ ಹಾದು ಹೋಗುವ ರೈಲು ಮಾರ್ಗಗಳಲ್ಲಿ 2014-2022ರ ಅವಧಿಯಲ್ಲಿ ಕನಿಷ್ಠ 135 ಆನೆಗಳು ಮೃತಪಟ್ಟಿವೆ. ಈ ವಿಚಾರವಾಗಿ ಲೋಕೋಪೈಲಟ್‌ಗಳಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಮುಂದಾದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತಾ ನಂದಾ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಭಾರತೀಯ ರೈಲ್ವೇ ಹಾಗೂ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಪ್ರಾಣಿಗಳು ಅಫಘಾತಕ್ಕೀಡಾಗುವುದನ್ನು ಹೇಗೆ ತಪ್ಪಿಸಬಹುದು ಎಂದು ಈ ವಿಡಿಯೋ ತಿಳಿಸುತ್ತಿದೆ.
ದೊಡ್ಡ ಗಜಪಡೆಯೊಂದು ರೈಲು ಹಳಿಯನ್ನು ದಾಟಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ರೈಲು ನಿಲ್ಲಿಸಿರುವ ಲೋಕೋ ಪೈಲಟ್‌ಗಳು ಈ ಸಂದರ್ಭದ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಆನೆಗಳಿರುವ ಕಾರಣ ಅವುಗಳ ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಲೋಕೋಪೈಲಟ್ ಒಬ್ಬರು ಹೇಳುತ್ತಿರುವುದನ್ನು ಹಿನ್ನೆಲೆಯಲ್ಲಿ ಕೇಳಿಸಿಕೊಳ್ಳಬಹುದಾಗಿದೆ.
“ಇಷ್ಟು ಜಾಗರೂಕರಾಗಿ ರೈಲುಗಳನ್ನು ಓಡಿಸುವ ಮೂಲಕ ಪ್ರಾಣಿ ಸಂಕುಲಕ್ಕೆ ಹಾನಿಯಾಗುವುದನ್ನು ತಡೆಗಟ್ಟುವುದು ನಿಜಕ್ಕೂ ಶ್ಲಾಘನೀಯ ಪರಿಶ್ರಮವಾಗಿದ್ದು, ಇಂಥ ಲೋಕೋಪೈಲಟ್‌ಗಳಿಗೆ ಪುರಸ್ಕರಿಸಬೇಕು,” ಎಂದು ಪ್ರಾಣಿಪ್ರಿಯ ನೆಟ್ಟಿಗರು ವಿಡಿಯೋ ನೋಡಿ ಕೊಂಡಾಡಿದ್ದಾರೆ.