ಅಚ್ಚರಿಯ ಉಡುಗೊರೆ ಯಾವತ್ತಿದ್ದರೂ ಸಂಭ್ರಮಾಶ್ಚರ್ಯಗಳನ್ನು ಉಂಟುಮಾಡುವಂಥದ್ದು. ಮತ್ತು ಪ್ರೀತಿ ಪಾತ್ರರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವಂಥದ್ದು. ಈಗ ಇಂತಹ ಒಂದು ಆಹ್ಲಾದಕರ ವಿದ್ಯಮಾನ ಈಗ ಸಾಮಾಜಿಕ ಜಾಲತಾಣಿಗರ ಗಮನ ಸೆಳೆದಿದೆ.
ವಯೋವೃದ್ಧ ವ್ಯಕ್ತಿಯೊಬ್ಬರಿಗೆ ಅವರ ದಿವಂಗತ ಪತ್ನಿಯ ಹುಟ್ಟುಹಬ್ಬದ ದಿನ, ಅವರ ಕುಟುಂಬದ ಸದಸ್ಯರು ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಅದಕ್ಕೆ ಅವರು ಪ್ರತಿಕ್ರಿಯಿಸಿದ ರೀತಿ ಮುದನೀಡುವಂಥದ್ದು. ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ. ಅವರ ಮೊಮ್ಮಗಳು ಮನ್ಶಾ ಶರ್ಮಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ರೀಲ್ ವಿಡಿಯೊದಲ್ಲಿ ಈ ದೃಶ್ಯವಿದೆ.
ವಿಡಿಯೋದಲ್ಲಿರುವ ದೃಶ್ಯದ ಪ್ರಕಾರ, ಎಲ್ಲಿಗೆ ಹೋಗುತ್ತಿದ್ದಾರೆಂಬುದನ್ನು ಮರೆತು ಕಾರಿನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಯನ್ನು ಕಾಣಬಹುದು. ” (ಅಜ್ಜ) ಅವರಿಗೆ ನಾವು ಇಂದು ಕಾರನ್ನು ಉಡುಗೊರೆಯಾಗಿ ನೀಡುತ್ತೇವೆ ಎಂಬುದು ತಿಳಿದಿಲ್ಲ !” ಎಂಬ ಶೀರ್ಷಿಕೆಯೂ ಇದೆ.
ಕಾರ್ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಸಾರಿಗೆ ವಾಹನ ಚಾಲನೆ ಮಾಡಬಹುದು, ಪ್ರತ್ಯೇಕ ಲೈಸೆನ್ಸ್ ಬೇಕಿಲ್ಲ
ಆ ವ್ಯಕ್ತಿ ಪತ್ನಿಯ ಜನ್ಮದಿನದಂದು ದುಃಖಿತರಾಗಿದ್ದರು. ಹೀಗಾಗಿ, ವಿಶೇಷ ದಿನದಂದು ಅವರಲ್ಲಿ ಉಲ್ಲಾಸ ತುಂಬಲು ಅಚ್ಚರಿಯ ಉಡುಗೊರೆ ನೀಡಲು ಕುಟುಂಬ ಸದಸ್ಯರು ತೀರ್ಮಾನಿಸುತ್ತಾರೆ. ಕಾರಿನಲ್ಲಿ ಹೋದ ಬಳಿಕ ಪಾರ್ಕಿಂಗ್ ಸ್ಥಳದಲ್ಲಿ ಮೊಮ್ಮಗನೊಂದಿಗೆ ಹೋದಾಗ, ಕಾರಿನ ಕೀ ಮತ್ತು ಚಾಕೊಲೇಟ್ನ ದೊಡ್ಡ ಪೆಟ್ಟಿಗೆಯನ್ನು ಇಟ್ಟುಕೊಳ್ಳಲು ಹೇಳಿದಾಗ ಅವರು ಗೊಂದಲಕ್ಕೆ ಒಳಗಾಗಿದ್ದು ಕಂಡುಬರುತ್ತದೆ.
ಕೊನೆಗೆ ಅದು ಉಡುಗೊರೆ ಎಂದು ವಿವರಿಸಿದಾಗ, ಅವರು ದಿಗ್ಭ್ರಮೆಗೊಂಡು, ಕೆನ್ನೆಗಳಿಗೆ ಬಡಿದುಕೊಂಡಿದ್ದಾರೆ. ಅಲ್ಲದೇ ಯಾರಿಗೋ ಫೋನ್ ಮಾಡಿ ಕಣ್ಣೀರು ಸುರಿಸುತ್ತ ಮಾತನಾಡಿದ್ದಾರೆ. ಇದು ನಿಜಕ್ಕೂ ಸಂಬಂಧಗಳ ಮಟ್ಟಿಗೆ ಆರೋಗ್ಯಕರ ಕ್ಷಣಗಳು ಎಂದು ಮನ್ಶಾ ವಿವರಿಸಿದ್ದಾರೆ. ಈ ವಿಡಿಯೋ ಆನ್ಲೈನ್ನಲ್ಲಿ 1.5 ಮಿಲಿಯನ್ ವೀಕ್ಷಣೆ ಆಗಿದ್ದು, ಅನೇಕ ಜನರ ಹೃದಯವನ್ನು ಸೆಳೆದಿದೆ.