ಪಂಜಾಬ್ ಅಸೆಂಬ್ಲಿ ಚುನಾವಣೆ ಅಖಾಡ ರಂಗೇರಿದೆ. ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಫೆಬ್ರವರಿ 6 ರಂದು ಘೋಷಿಸಲಾಗುವುದು ಎಂದು ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಗುರುವಾರ ಹೇಳಿದರು.
ಫೆಬ್ರವರಿ 6 ರಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದು. ಆ ದಿನ ನಾನು ರಾಹುಲ್ ಗಾಂಧಿಯೊಂದಿಗೆ ಇರುತ್ತೇನೆ ಎಂದು ಚನ್ನಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಈಗಾಗಲೇ ಸಿಎಂ ಸ್ಥಾನಕ್ಕೆ ಭಗವಂತ್ ಸಿಂಗ್ ಮಾನ್ ಹೆಸರನ್ನು ಘೋಷಿಸಿರುವುದರಿಂದ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ಒತ್ತಡದಲ್ಲಿದೆ.
ಮತ್ತೊಂದೆಡೆ, ಚುನಾವಣೆಯ ನಂತರ ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿರುವ ನವಜೋತ್ ಸಿಂಗ್ ಸಿಧು ಅವರೊಂದಿಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟವಿದೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ, ಸಿಧು ಅವರು ಉನ್ನತ ಹುದ್ದೆ ಅಲಂಕರಿಸುವ ಭರವಸೆ ಹೊಂದಿದ್ದರು. ಆದರೆ, ಪ್ರತಿಷ್ಠಿತ ಹುದ್ದೆಗೆ ಹೈಕಮಾಂಡ್ ಚನ್ನಿ ಅವರನ್ನು ಆಯ್ಕೆ ಮಾಡಿದೆ.
ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚನ್ನಿ ಹೇಳಿದ್ದರು.
ಪ್ರಮುಖವಾಗಿ, ಪಂಜಾಬ್ ಗೆ ರಾಹುಲ್ ಗಾಂಧಿ ಅವರು ಭೇಟಿ ನೀಡುವ ದಿನದಂದು ಕಾಂಗ್ರೆಸ್ ತನ್ನ ಮುಖ್ಯಮಂತ್ರಿಯ ಯಾರೆಂಬುದನ್ನು ಘೋಷಿಸಲಿದೆ.
ಜನವರಿ 27 ರಂದು ಪಂಜಾಬ್‌ಗೆ ಕೊನೆಯ ಬಾರಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಸಿಎಂ ಆಯ್ಕೆಯೊಂದಿಗೆ ಪಂಜಾಬ್ ವಿಧಾನಸಭೆ ಚುನಾವಣೆಗೆ ಹೋಗಲಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದರು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಈಗಾಗಲೇ ಸಮಾಲೋಚನೆ ಆರಂಭಿಸಿದ್ದಾರೆ. ಈ ಮಧ್ಯೆ, ಕಾಂಗ್ರೆಸ್ ತನ್ನ ಶಕ್ತಿ ಆ್ಯಪ್ ಮೂಲಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಪ್ರತಿಕ್ರಿಯೆಗಳನ್ನು ಕೇಳುತ್ತಿದೆ.