ಬೆಂಗಳೂರು: ರಾಜ್ಯದಲ್ಲಿ ಭರ್ಜರಿ ಬಹುಮತ ಗಳಿಸಿದ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಶುರುವಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಹುದ್ದೆಗೆ ಪೈಪೋಟಿ ಇದೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಲಾಗುವುದು. ನಂತರ ಹೈಕಮಾಂಡ್ ಅಭಿಪ್ರಾಯದಂತೆ ಸಿಎಂ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಸುವ ಕುರಿತು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಪಕ್ಷದ ನಾಯಕರೊಂದಿಗಿನ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ತಮಗೆ ಮೊದಲ ಅವಧಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಹಲವು ನಾಯಕರು ಕೂಡ ಸಿಎಂ ಹುದ್ದೆ ರೇಸ್ ನಲ್ಲಿದ್ದಾರೆ. ಆದರೆ, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಲ್ಲಿ ಒಬ್ಬರನ್ನು ಹೈಕಮಾಂಡ್ ಆಯ್ಕೆ ಮಾಡಲಿದ್ದು, ಇಬ್ಬರು ನಾಯಕರು ಮೊದಲ ಅವಧಿಗೆ ತಮಗೆ ಸಿಎಂ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ನಾಯಕರು ಕೂಡ ಇದೇ ಸೂತ್ರ ಸಿದ್ಧಪಡಿಸತೊಡಗಿದ್ದಾರೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಿಎಂ ಅಧಿಕಾರಾವಧಿಯನ್ನು ಕಾಂಗ್ರೆಸ್ ವಿಭಜಿಸಬಹುದು. ಅಭೂತಪೂರ್ವ ಗೆಲುವು ಸಾಧಿಸಿದ ನಂತರ, ಕಾಂಗ್ರೆಸ್ ಗಮನ ಈಗ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದರ ಮೇಲೆ ಕೇಂದ್ರೀಕರಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಷ್ಠಿತ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಮುಖ್ಯಮಂತ್ರಿ ಅವಧಿಯನ್ನು ವಿಭಜಿಸಲು ಕಾಂಗ್ರೆಸ್ ಸೂತ್ರವನ್ನು ರೂಪಿಸುತ್ತಿದೆ. ಸಿದ್ದರಾಮಯ್ಯ ಅವರು ಮೊದಲ 2.5 ವರ್ಷ ಸಿಎಂ ಆಗಿದ್ದರೆ, ಮುಂದಿನ 2.5 ವರ್ಷ ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎನ್ನಲಾಗಿದೆ.