ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ. ಫೆಬ್ರವರಿ 1 ರ ಮೊದಲು ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಸುಮಾರು ಅರ್ಧ ಮಿಲಿಯನ್ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಕಳೆದ ನಾಲ್ಕು ವಾರಗಳಲ್ಲಿ ಇಲ್ಲಿ ಕೊರೊನಾ ಪ್ರಕರಣಗಳಲ್ಲಿ ಶೇಕಡಾ 55 ರಷ್ಟು ಹೆಚ್ಚಳ ಕಂಡು ಬಂದಿದೆ. ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಶೇಕಡಾ 48 ರಷ್ಟು ಸಾವು ಸಂಭವಿಸಿದೆ.
ಡಬ್ಲ್ಯುಎಚ್ಒ ಯುರೋಪಿಯನ್ ಪ್ರಾದೇಶಿಕ ನಿರ್ದೇಶಕ ಡಾ. ಹ್ಯಾನ್ಸ್ ಕ್ಲೂಗೆ ಜನರ ನಿರ್ಲಕ್ಷ್ಯ, ಮಾಸ್ಕ್ ಧರಿಸುವುದ್ರಲ್ಲಿ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದಿದ್ದಾರೆ. ಚಳಿಗಾಲದ ಋತು ಕೂಡ ಕೊರೊನಾ ಹೆಚ್ಚಳಕ್ಕೆ ಕಾರಣವಾಗಬಹುದು ಎಂದವರು ಹೇಳಿದ್ದಾರೆ.
ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಶೇಕಡಾ 95 ರಷ್ಟು ಜನರು ಮಾಸ್ಕ್ ಧರಿಸಿದ್ದರೆ, ಫೆಬ್ರವರಿ 2022 ರ ಮೊದಲು ಪ್ರಾಣ ಕಳೆದುಕೊಳ್ಳುವ ಅರ್ಧ ಮಿಲಿಯನ್ ಜನರಲ್ಲಿ 188,000 ಜನರನ್ನು ಉಳಿಸಬಹುದು ಎಂದು ಕ್ಲೂಗೆ ಹೇಳಿದ್ದಾರೆ.