
ಬೆಂಗಳೂರು: ಹೃದಯ ಸಂಬಂಧಿತ ತೊಂದರೆಗಳ ನಿಯಂತ್ರಣಕ್ಕೆ ಒಂದೇ ಮಾತ್ರೆಯನ್ನು ಬಳಸಬಹುದಾಗಿದೆ. ನಾಲ್ಕು ಮಾತ್ರೆಗಳ ಬದಲು ಎಲ್ಲಾ ಸತ್ವ ಒಳಗೊಂಡಿರುವ ಪಾಲಿಪಿಲ್ ಎಂಬ ಒಂದೇ ಮಾತ್ರೆಯನ್ನು ಬಳಸಬಹುದಾಗಿದೆ.
ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಕೆನಡಾದ ಜನಸಂಖ್ಯೆ ಆರೋಗ್ಯ ಸಂಶೋಧನಾ ಸಂಸ್ಥೆಗಳು ನಡೆಸಿದ ಅಧ್ಯಯನದ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಅಗತ್ಯ ಔಷಧಗಳ ಪಟ್ಟಿಗೆ ಪಾಲಿಪಿಲ್ ಮಾತ್ರೆಯನ್ನು ಸೇರ್ಪಡೆ ಮಾಡಿದೆ.
ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಸಂಭವಿಸುವ ಮರಣದ ಸಾಧ್ಯತೆಗಳನ್ನು ತಡೆಯುವಲ್ಲಿ ಈ ಮಾತ್ರೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ಹೃದಯ ಸಂಬಂಧಿ ತೊಂದರೆಗಳ ನಿಯಂತ್ರಣಕ್ಕಾಗಿ ನಾಲ್ಕು ಮಾತ್ರೆಗಳ ಸಂಯೋಜನೆಯಲ್ಲಿ ಸಾಮಾನ್ಯ ರಕ್ತದೊತ್ತಡ ಕಡಿಮೆ ಮಾಡುವ ಮೂರು ಔಷಧಗಳು ಮತ್ತು ಕೊಬ್ಬಿನಾಂಶ ನಿಯಂತ್ರಣ ಮಾಡುವ ಒಂದು ಔಷಧ ಒಳಗೊಂಡಿರುತ್ತದೆ. ಹೆಚ್ಚಿನ ಸಂಖ್ಯೆಯ ಭಾರತೀಯರು ಬಿಪಿ ಮತ್ತು ಕೊಬ್ಬಿನಾಂಶಗಳ ತೊಂದರೆಯಿಂದ ಬಳಲುತ್ತಿದ್ದಾರೆ. ಇದನ್ನು ತಡೆಯಲು ಹೈ ಬಿಪಿ ರಕ್ತ ತಿಳಿಗೊಳಿಸುವ ಮತ್ತು ಕೊಬ್ಬಿನಾಂಶ ಕಡಿಮೆ ಮಾಡುವ ಮಾತ್ರೆಗಳನ್ನು ಜೀವಿತಾವಧಿವರೆಗೂ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಈಗ ಎಲ್ಲಾ ಸತ್ವ ಒಳಗೊಂಡ ಒಂದೇ ಮಾತ್ರೆ ಬಳಸುವುದರಿಂದ ಖರ್ಚು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.