ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ಸಾವಿನ ವರದಿಗಳು ಈವರೆಗೆೆ ಕಂಡು ಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜಗತ್ತಿನಾದ್ಯಂತ ಹಲವು ದೇಶಗಳು ಓಮಿಕ್ರಾನ್ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಿವೆ. ಇದರ ಮಧ್ಯೆ ಪುರಾವೆಗಳನ್ನು ಸಂಗ್ರಹಿಸಲು ವಿಶ್ವ ಆರೋಗ್ಯ ಸಂಸ್ಥೆ ಶ್ರಮಿಸುತ್ತಿದೆ.
ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಹೊಸ ರೂಪಾಂತರದ ಅಂಕಿ – ಸಂಖ್ಯೆಗಳನ್ನು ನೋಂದಾಯಿಸುತ್ತಿದ್ದರೂ ಸಾವುಗಳು ಮಾತ್ರ ಇದುವರೆಗೂ ವರದಿಯಾಗಿಲ್ಲ ಎನ್ನಲಾಗಿದೆ.
ಓಮಿಕ್ರಾನ್ ಸಂಬಂಧಿ ಸಾವಿನ ವರದಿಗಳನ್ನು ನಾನು ಇನ್ನೂ ನೋಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್ಕಿಯರ್ ಹೇಳಿದ್ದಾರೆ.
ಹೀಗಾಗಿ ನಾವು ಎಲ್ಲ ಪುರಾವೆಗಳನ್ನು ಸಂಗ್ರಹಿಸುತ್ತಿದ್ದೇವೆ. ಓಮಿಕ್ರಾನ್ ಹರಡುತ್ತಿದ್ದಂತೆ ಹಲವು ದೇಶಗಳಿಂದ ವಿವಿಧ ಮಾಹಿತಿಗಳು ಬರುತ್ತಿವೆ. ಈ ಎಲ್ಲ ಮಾಹಿತಿಗಳು, ಅವಲೋಕನಗಳು, ಪರೀಕ್ಷೆಗಳನ್ನು ತಜ್ಞರು ಎಚ್ಚರಿಕೆಯಿಂದ ನೋಡಿ ಮೌಲ್ಯಮಾಪನ ಮಾಡಬೇಕು. ಅದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಲಿಂಡ್ಕಿಯರ್ ಹೇಳಿದ್ದಾರೆ.