ಪಂಜಾಬ್‌ನ ಜನ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತಾರೆಯೇ ಹೊರತು ಪಕ್ಷದ ಹೈಕಮಾಂಡ್ ಅಲ್ಲ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಮಂಗಳವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸಿದ್ದು ಅವರು ಚುನಾವಣೆಗೆ ಮುನ್ನ ಕಾಂಗ್ರೆಸ್ ನ ಡಿಜಿಟಲ್ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಾರೆ. ಫೆಬ್ರವರಿ 14 ರಂದು ಪಂಜಾಬ್ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಚಂಡೀಗಢದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ನವಜೋತ್ ಸಿಂಗ್ ಸಿಧು, ಪಂಜಾಬ್ ಸಿಎಂ ಯಾರಾಗಬೇಕೆಂದು ಜನರು ನಿರ್ಧರಿಸುತ್ತಾರೆ, ಕಾಂಗ್ರೆಸ್ ಹೈಕಮಾಂಡ್ ಸಿಎಂ ಮಾಡುತ್ತದೆ ಎಂದು ನಿಮಗೆ ಯಾರು ಹೇಳಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಅನುಪಸ್ಥಿತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಧು, ಪಂಜಾಬ್ ಮಾದರಿಯು ಜನರ ಮಾದರಿಯಾಗಿದೆ, ಮಾರ್ಗಸೂಚಿಯನ್ನು ನೀಡುವ ಪ್ರಯತ್ನವಾಗಿದೆ. ಅಧಿಕಾರವನ್ನು ಜನರಿಗೆ ಹಿಂದಿರುಗಿಸಲು ನಾವು ಯೋಜನೆ ರೂಪಿಸಿದ್ದೇವೆ ಎಂದಿದ್ದಾರೆ.
ಕ್ಯಾಬಿನೆಟ್ ಅಂಗೀಕರಿಸಿದ ನಿರ್ಣಯದ ಅಧಿಸೂಚನೆ ನಿಲ್ಲಿಸುವ ಶಕ್ತಿ ಹೊಂದಿರುವ ಪ್ರಬಲ ‘ಮಾಫಿಯಾ ಮಾದರಿ’ಯನ್ನು ಎದುರಿಸಲು, ರಾಜ್ಯದ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡಲು ಮತ್ತು ಸರಿಯಾದ ಫಲಾನುಭವಿಗಳಿಗೆ ಅಧಿಕಾರ ಮರಳಿ ನೀಡಲು ಒಂದು ಮಾದರಿ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಮಾಡೆಲ್ ಬಗ್ಗೆ ವಿವರಿಸಿದ ಕ್ರಿಕೆಟಿಗ-ರಾಜಕಾರಣಿ ಸಿಧು, ಮದ್ಯ, ಗಣಿಗಾರಿಕೆ, ಸಾರಿಗೆ, ಕೇಬಲ್ ಟೆಲಿವಿಷನ್ ಮತ್ತು ನದಿ ನೀರಿನಲ್ಲಿ ಸರ್ಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಬಗ್ಗೆ ಮಾತನಾಡಿದರು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸಂಪನ್ಮೂಲಗಳನ್ನು ಪುನಶ್ಚೇತನಗೊಳಿಸಿ ಮತ್ತು ಆದಾಯದ ಕಳ್ಳತನಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ.