ರಾಷ್ಟ್ರ ರಾಜಧಾನಿ ದೆಹಲಿಯಿಂದ ಆರಂಭಗೊಂಡು ಹಲವು ಮೆಟ್ರೋ ನಗರಗಳಲ್ಲಿ ಮಿತಿಮೀರುತ್ತಿರುವ ಜನಸಂದಣಿ, ಆ ಮೂಲಕ ಸಾರಿಗೆಗಾಗಿ ಹೆಚ್ಚುತ್ತಿರುವ ಖಾಸಗಿ ವಾಹನಗಳು, ಕೈಗಾರಿಕೆಗಳು, ಕಟ್ಟಡ ಕಾಮಗಾರಿಗಳ ಪರಿಣಾಮ ದೇಶಾದ್ಯಂತ ವಾಯುಮಾಲಿನ್ಯ ದಿನೇದಿನೆ ಭಾರಿ ಏರಿಕೆ ಕಾಣುತ್ತಿದೆ. ಇನ್ನೇನು ಎರಡು ತಿಂಗಳಲ್ಲಿ ದೆಹಲಿಯಲ್ಲಿ ಕಳೆದ ಅನೇಕ ವರ್ಷಗಳಂತೆಯೇ ವಾಯುಮಾಲಿನ್ಯ ಅಪಾಯದ ಗುಣಮಟ್ಟ ತಲುಪಿ, ಜನರ ಸ್ವಾಸ್ಥ್ಯ ಹಾಳಾಗುವ ಭೀತಿ ಈಗಲೇ ಎದುರಾಗಿದೆ.
ಇಂಥ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲೂಹೆಚ್‌ಒ) ‘ಜಾಗತಿಕ ವಾಯು ಗುಣಮಟ್ಟ ಮಾರ್ಗಸೂಚಿ ‘ಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ಆರು ಮಾಲಿನ್ಯ ಕಣಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಕಡ್ಡಾಯವಾಗಿ ಎಲ್ಲ ರಾಷ್ಟ್ರಗಳು ಹತ್ತಿಕ್ಕಲೇ ಬೇಕು ಎಂದು ಸೂಚಿಸಲಾಗಿದೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; 24 ಗಂಟೆಯಲ್ಲಿ 282 ಜನ ಮಹಾಮಾರಿಗೆ ಬಲಿ
‘ಪಿಎಂ 2.5’ ಹಾಗೂ ‘ ಪಿಎಂ 10 ‘ ಗಳನ್ನು ಸಾಂಪ್ರದಾಯಿಕ ಮಾಲಿನ್ಯ ಕಣಗಳು ಎಂದು ಗುರುತಿಸಲಾಗಿದೆ. ಇದರ ಜೊತೆಗೆ ‘ನೈಟ್ರೋಜನ್ ಡೈ ಆಕ್ಸೈಡ್’, ಸಲ್ಫರ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಮತ್ತು ‘ಓಝೋನ್ (ಒ3)’ ಗಳನ್ನು ಗಾಳಿಯ ಶುದ್ಧತೆ ಹಾಳುಗೆಡವದಂತೆ ಅತಿಕಡಿಮೆ ಪ್ರಮಾಣಕ್ಕೆ ಇಳಿಸಬೇಕು. ಆ ಮೂಲಕ ಜನರ ನಿವಾಸಗಳ ಸುತ್ತಲಿನ ಗಾಳಿಯ ಗುಣಮಟ್ಟ ಸುಧಾರಣೆಯಾಗಿ, ಆರೋಗ್ಯಕರ ಉಸಿರಾಟಕ್ಕೆ ಸರ್ಕಾರ ಕ್ರಮ ಜರುಗಿಸಬೇಕು. ಖಾಸಗಿ ಸ್ವಸಹಾಯ ಸಂಘಗಳು ಕೂಡ ಈ ಮಾಲಿನ್ಯಕಾರಕ ಕಣಗಳನ್ನು ಹೊರಸೂಸುವ ಮೂಲಗಳ ವಿರುದ್ಧ ಸರ್ಕಾರಕ್ಕೆ ದೂರು ನೀಡಬಹುದು ಎಂದು ಡಬ್ಲೂಎಚ್‌ಒ ಹೇಳಿದೆ.
ಕಳೆದ 2005ರಲ್ಲಿ ಈ ಮಾಲಿನ್ಯಕಾರಕ ಕಣಗಳ ಮಿತಿಯನ್ನು ನಿರ್ಧರಿಸಿ, ಗುಣಮಟ್ಟದ ಮಾರ್ಗಸೂಚಿಗಳನ್ನು ಡಬ್ಲೂಎಚ್‌ಒ ಬಿಡುಗಡೆ ಮಾಡಿತ್ತು. 2019ರಲ್ಲಿ ಜಾಗತಿಕ ಜನಸಂಖ್ಯೆಯ ಶೇ.90ರಷ್ಟು ಮಂದಿ, ಡಬ್ಲೂಎಚ್‌ಒ ಮಾಲಿನ್ಯ ಕಣಗಳ ಎಚ್ಚರಿಕೆ ಗುಣಮಟ್ಟಕ್ಕಿಂತ ಅಧಿಕವಿರುವ ವಿಷ ಗಾಳಿಯಿರುವ ವಾತಾವರಣಗಳಲ್ಲಿ ಜೀವನ ಸಾಗಿಸಿದ್ದಾರೆ. ಇದರಿಂದಾಗಿ ವಾರ್ಷಿಕ 70 ಲಕ್ಷ ಜನರು ವಿಶ್ವಾದ್ಯಂತ ಅವಧಿಗೂ ಮುನ್ನವೇ ಸಾವನ್ನಪ್ಪುತ್ತಿದ್ದಾರೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.