ಜಿನೆವಾ, ಸ್ವಿಟ್ಜರ್ ಲೆಂಡ್: ಕೊರೋನಾ ಲಸಿಕೆ ವಿತರಣೆಯಲ್ಲಿ ಬಡ ರಾಷ್ಟ್ರಗಳನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಡಾನೊಮ್ ಗೆಬ್ರೆಯೆಸಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಗತ್ತು ದುರಂತದ ನೈತಿಕ ಅಧಃಪತನದ ಅಂಚಿನಲ್ಲಿದೆ. ಬಡ ರಾಷ್ಟ್ರಗಳ ಬಗ್ಗೆ ಮುಂದುವರಿದ ರಾಷ್ಟ್ರಗಳು ಯೋಚನೆ ಮಾಡುತ್ತಿಲ್ಲ. ಕೊರೋನಾ ಲಸಿಕೆ ನ್ಯಾಯಯುತವಾಗಿ ಹಂಚಿಕೆ ಆಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧಿವೇಶನದಲ್ಲಿ ಮಾತನಾಡಿದ ಟೆಡ್ರೋಸ್, ಜಗತ್ತು ದುರಂತದ ನೈತಿಕ ವೈಫಲ್ಯದ ಅಂಚಿನಲ್ಲಿದೆ. ವಿಶ್ವದ ಬಡವರ ಜೀವನದ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದ್ದಾರೆ.
49 ಶ್ರೀಮಂತ ದೇಶಗಳಲ್ಲಿ 39 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಈಗ ನೀಡಲಾಗಿದೆ. ಕಡಿಮೆ ಆದಾಯ ಹೊಂದಿದ ಬಡದೇಶಗಳಲ್ಲಿ ಕೇವಲ 25 ಲಸಿಕೆ ನೀಡಲಾಗಿದೆ. ಗಮನಿಸಿ, 25 ಮಿಲಿಯನ್ ಅಲ್ಲ, 25 ಸಾವಿರವೂ ಅಲ್ಲ, ಕೇವಲ 25 ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಶ್ರೀಮಂತ ಮತ್ತು ಬಡ ದೇಶಗಳ ಕೊರೊನಾ ಲಸಿಕೆ ಅಸಮಾನ ಹಂಚಿಕೆ ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೆಚ್ಚಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.