9 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಒಂದನ್ನು ಭೇದಿಸಲು ಗಿಳಿ ನೆರವಾಗಿರುವ ಅಚ್ಚರಿಯ ಸುದ್ದಿ ಇದು. ಗಿಳಿ ಕೊಟ್ಟ ಸುಳಿವಿನಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಇದೀಗ ನ್ಯಾಯಾಲಯ ಅವರುಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ವಿವರ: 2014ರ ಫೆಬ್ರವರಿ 20ರಂದು ಉತ್ತರ ಪ್ರದೇಶದಲ್ಲಿ ಗೃಹಿಣಿ ಒಬ್ಬರ ಹತ್ಯೆ ನಡೆದಿತ್ತು. ವಿಜಯ್ ಶರ್ಮಾ ಎಂಬವರು ತಮ್ಮ ಮಕ್ಕಳೊಂದಿಗೆ ಮದುವೆ ಸಮಾರಂಭಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಅವರ ಪತ್ನಿ ನೀಲಂ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ದಂಪತಿ ತಮ್ಮ ಮನೆಯಲ್ಲಿ ಒಂದು ನಾಯಿ ಹಾಗೂ ಗಿಳಿಯನ್ನು ಸಾಕಿದ್ದು ಆರೋಪಿಗಳು ನಾಯಿಯನ್ನೂ ಸಹ ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೂ ಸಹ ಕೊಲೆ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ.
ಪತ್ನಿ ಕಳೆದುಕೊಂಡಿದ್ದ ನೋವಿನಲ್ಲಿದ್ದ ವಿಜಯ್ ಶರ್ಮಾ, ನೀಲಂ ಸಾವಿನ ಬಳಿಕ ತಮ್ಮ ಸಾಕು ಗಿಳಿ ಸರಿಯಾಗಿ ಆಹಾರ ಸೇವಿಸದೆ ಬಡಕಲಾಗುತ್ತಿರುವುದನ್ನು ಗಮನಿಸಿದ್ದರು. ಅಲ್ಲದೆ ಕೊಲೆ ನಡೆದ ಸಂದರ್ಭದಲ್ಲಿ ಗಿಳಿ ಸಹ ಮನೆಯಲ್ಲಿದ್ದಿದ್ದನ್ನು ಅರಿತಿದ್ದ ಅವರು ಅದು ಏನಾದರೂ ಸುಳಿವು ನೀಡಬಹುದಾ ಎಂದು ಪ್ರಯತ್ನ ನಡೆಸಿದ್ದಾರೆ.
ಹೀಗಾಗಿ ಅದರ ಮುಂದೆ ತಾವು ಅನುಮಾನ ಹೊಂದಿದ್ದವರ ಹೆಸರುಗಳನ್ನು ಹೇಳಲು ಆರಂಭಿಸಿದ್ದು, ಅಶು ಎನ್ನುತ್ತಿದಂತೆ ಗಿಳಿ ಚೀರಲಾರಂಭಿಸಿದೆ. ಅಶು ಅಲಿಯಾಸ್ ಅಶುತೋಷ್ ಎಂಬವನು ವಿಜಯ್ ಶರ್ಮಾ ಅವರ ಸೋದರಳಿಯನಾಗಿದ್ದು ಮನೆಯಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ.
ವಿಜಯ್ ಶರ್ಮಾ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಶುತೋಷ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಹಣದಾಸೆಗಾಗಿ ತನ್ನ ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿ ದರೋಡೆ ಮಾಡಿರುವುದು ಪತ್ತೆಯಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಶುತೋಷ್ ಹಾಗೂ ಆತನ ಸ್ನೇಹಿತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.