ದಯಾಮರಣದ ಕುರಿತಂತೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ನೆದರ್ಲೆಂಡ್‌ನ ಯುವತಿಯೊಬ್ಬಳು ಕಾನೂನುಬದ್ಧವಾಗಿ ಸಾಯಲು ಹೊರಟಿದ್ದಾಳೆ. 28 ವರ್ಷದ ಜೋರಾಯಾ ಟೆರ್ ಬೀಕ್ ಈ ಕಠಿಣ ನಿರ್ಧಾರ ಮಾಡಿದ್ದಾಳೆ.
ಈಕೆ ದೈಹಿಕವಾಗಿ ಸಂಪೂರ್ಣ ಆರೋಗ್ಯವಾಗಿದ್ದಾಳೆ. ಆದರೆ ದೀರ್ಘಕಾಲದ ಖಿನ್ನತೆ, ಆಟಿಸಂ ಸೇರಿದಂತೆ ಹಲವಾರು ಮಾನಸಿಕ ಆರೋಗ್ಯ ಪರಿಸ್ಥಿತಿಗಳೊಂದಿಗೆ ನಿರಂತರ ಹೋರಾಟ ನಡೆಸುತ್ತಿದ್ದಾಳೆ.
ಮನೋವೈದ್ಯೆಯಾಗಬೇಕು ಎಂಬುದು ಜೋರಾಯಾಳ ಬಯಕೆಯಾಗಿತ್ತು. ಆದ್ರೀಗ ಕಾನೂನುಬದ್ಧವಾಗಿ ತನ್ನ ಬದುಕನ್ನೇ ಕೊನೆಗಾಣಿಸಲು ಹೊರಟಿದ್ದಾಳೆ. ಈಕೆ ಮೇ ತಿಂಗಳಿನಲ್ಲಿ ಸಾಯಬೇಕೆಂಬ ನಿರ್ಧಾರಕ್ಕೆ ಬಂದಿದ್ದಾಳೆ. ತನ್ನ ಮಾನಸಿಕ ಆರೋಗ್ಯ ಸುಧಾರಿಸಲು ಅಸಾಧ್ಯ ಎಂದೆನಿಸಿ ಆಕೆ ದಯಾಮರಣಕ್ಕೆ ಬೇಡಿಕೆ ಇಟ್ಟಿದ್ದಳು.
ಡಚ್ ಮಹಿಳೆ ಜೊರಾಯಾ ಪ್ರಸ್ತುತ ಜರ್ಮನಿ ಹಾಗೂ ನೆದರ್ಲ್ಯಾಂಡ್ಸ್ ಗಡಿಯ ಸಮೀಪವಿರುವ ಸಣ್ಣ ಪಟ್ಟಣದಲ್ಲಿ ತನ್ನ 40 ವರ್ಷದ ಗೆಳೆಯನೊಂದಿಗೆ ವಾಸಿಸುತ್ತಾಳೆ. ಎರಡು ಬೆಕ್ಕುಗಳನ್ನೂ ಸಾಕಿದ್ದಾಳೆ. ಮಾನಸಿಕ ಆರೋಗ್ಯ ಸಮಸ್ಯೆಗಳಿಂದಾಗಿ ಆಕೆಗೆ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ವೃತ್ತಿಜೀವನವನ್ನು ಪ್ರಾರಂಭಿಸುವುದು ಕೂಡ ಅಸಾಧ್ಯವಾಯ್ತು.
ಜೋರಾಯಾ ಮತ್ತು ಅವಳ ಗೆಳೆಯ ಕಾಡಿನಲ್ಲಿ ಒಂದು ಸುಂದರವಾದ ಸ್ಥಳ ವನ್ನು ಗುರುತಿಸಿದ್ದಾರೆ, ಅಲ್ಲಿ ಅವಳ ಚಿತಾಭಸ್ಮವನ್ನು ಹಾಕಲು ನಿರ್ಧರಿಸಿದ್ದಾರೆ. ಕೊನೆಯವರೆಗೂ ತನ್ನೊಂದಿಗೆ ಇರುವಂತೆ ಪ್ರಿಯಕರನ ಬಳಿ ಜೋರಾಯಾ ಕೇಳಿಕೊಂಡಿದ್ದಾಳಂತೆ.
ಹೇಗಿರುತ್ತೆ ದಯಾಮರಣದ ಪ್ರಕ್ರಿಯೆ ?
ವೈದ್ಯರು ಮೊದಲು ಜೋರಾಯಾಗೆ ನಿದ್ರಾಜನಕವನ್ನು ನೀಡುತ್ತಾರೆ. ನಂತರ ಹೃದಯ ಬಡಿತವನ್ನು ನಿಲ್ಲಿಸುವ ಮತ್ತೊಂದು ಔಷಧವನ್ನು ಚುಚ್ಚಲಾಗುತ್ತದೆ. ನರಗಳನ್ನು ನೆಲೆಗೊಳಿಸಿ ಮೃದುವಾದ ವಾತಾವರಣವನ್ನು ಸೃಷ್ಟಿಸಿದ ಬಳಿಕವಷ್ಟೆ ಆಕೆಯ ಬದುಕನ್ನು ಅಂತ್ಯಗೊಳಿಸಲಾಗುತ್ತದೆ. ಅದಕ್ಕೂ ಮುನ್ನ ಕೊನೆಯ ಬಾರಿಗೆ ಆಕೆಯ ನಿರ್ಧಾರದ ಬಗ್ಗೆ ವೈದ್ಯರು ಕೇಳುತ್ತಾರೆ. ಜೋರಾಯಾ ತನ್ನ ನಿರ್ಧಾರಕ್ಕೆ ಬದ್ಧ ಎಂಬುದನ್ನು ಸ್ಪಷ್ಟಪಡಿಸಿದ ಬಳಿಕವಷ್ಟೆ ಆಕೆಗೆ ದಯಾಮರಣ ನೀಡಲಾಗುತ್ತದೆ. ತನ್ನ ತೀರ್ಮಾನಕ್ಕೆ ಬದ್ಧಳಾಗಿದ್ದು ಈ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಈಗಾಗ್ಲೇ ಆಕೆ ಸ್ಪಷ್ಟಪಡಿಸಿದ್ದಾಳೆ.