ಹೈದರಾಬಾದ್: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕುಟುಂಬ ತೆಲಂಗಾಣದ ಖ್ಯಾತ ಜ್ಯೋತಿಷಿ ಓರ್ವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹೆಚ್.ಡಿ. ರೇವಣ್ಣ ದಂಪತಿ ಹಾಗೂ ಮಕ್ಕಳು ಇತ್ತೀಚೆಗೆ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತರಾಗಿರುವ ವೇಣುಸ್ವಾಮಿ ಅವರನ್ನು ಭೇಟಿಯಾಗಿದ್ದು, ರೇವಣ್ಣ ದಂಪತಿ ವೇಣುಸ್ವಾಮಿ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ಆಶೀರ್ವಾದ ಪಡೆದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೇವಣ್ಣ ಕುಟುಂಬ ವೇಣುಸ್ವಾಮಿ ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಇಷ್ಟಕ್ಕೂ ಜ್ಯೋತಿಷಿ ವೇಣುಸ್ವಾಮಿ ಯಾರು? ಎಂಬುದನ್ನು ನೋಡುವುದಾದರೆ ಸಿನಿ ದಿಗ್ಗಜರ ಬಗ್ಗೆ, ಖ್ಯಾತ ಉದ್ಯಮಿಗಳ ಬಗ್ಗೆ, ರಾಜಕೀಯ ಗಣ್ಯರ ಬಗ್ಗೆ ಅವರು ಹೇಳಿರುವ ಹಲವು ಭವಿಷ್ಯಗಳು ನಿಜವಾಗಿವೆ ಎನ್ನಲಾಗಿದೆ. ಪ್ರಭಾಸ್ ಸಿನಿಮಾ ಬಗ್ಗೆ, ನಾಗಚೈತನ್ಯ-ಸಮಂತಾ ಜೀವನದ ಬಗ್ಗೆ, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನಿಧಿ ಅಗರ್ವಾಲ್ ಹೀಗೆ ಸಾಲು ಸಾಲು ಸೆಲಿಬ್ರಿಟಿಗಳ ಭವಿಷ್ಯ ನುಡಿದಿದ್ದ ವೇಣುಸ್ವಾಮಿ ತೆಲುಗು ಚಿತ್ರರಂಗದ ಸೆಲೆಬ್ರಿಟಿ ಜ್ಯೋತಿಷಿ.
ನಟಿ ರಶ್ಮಿಕಾ ಮಂದಣ್ಣ, ನಿಧಿ ಅಗರ್ವಾಲ್ ಸೇರಿದಂತೆ ಹಲವರು ವೇಣುಸ್ವಾಮಿ ನೇತೃತ್ವದಲ್ಲಿ ಪೂಜೆ, ಹೋಮಗಳನ್ನು ಮಾಡಿಸಿದ ಬಳಿಕವೇ ಸ್ಟಾರ್ ಪಟ್ಟಕ್ಕೇರಿದರು ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ ಇತ್ತೀಚೆಗೆ ಟಾಲಿವುಡ್ ನಲ್ಲಿ ಭಾರಿ ಜನಪ್ರಿಯತೆ ಪಡೆಯುತ್ತಿರುವ ಶ್ರೀಲೀಲಾ ಬಗ್ಗೆಯೂ ಭವಿಷ್ಯ ನುಡಿದಿದ್ದು, ಮುಂದಿನ ದಿನಗಳಲ್ಲಿ ಶ್ರೀಲೀಲಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಏಕಮೇವಾಧಿಪತ್ಯ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ತೆಲಂಗಾಣದ ವೇಣುಸ್ವಾಮಿ ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ಖ್ಯಾತಿ ಪಡೆದಿದ್ದಾರೆ. ತೆಲುಗು ಸಿನಿಮಾಗಳ ಮುಹೂರ್ತ, ಪೂಜೆ, ನಿರ್ಮಾಪಕರು, ನಿರ್ದೇಶಕರು, ಜನಪ್ರಿಯ ನಟ-ನಟಿಯರ ಭವಿಷ್ಯ ಹೇಳುವುದು, ಸಿನಿಮಾ ಬಿಡುಗಡೆಗೆ ದಿನಾಂಕ ನೋಡುವುದು, ರಾಜಕಾರಣಿಗಳು, ಉದ್ಯಮಿಗಳ ಭವಿಷ್ಯ, ಹೋಮ-ಹವನಗಳನ್ನು ಮಾಡುತ್ತಾ ಬಂದಿದ್ದಾರೆ. ಇನ್ನು ತಾವು ಹೇಳುವ ಭವಿಷ್ಯದ ಬಗ್ಗೆ ಹಾಗೂ ತಮ್ಮದೇ ಆದ ಬ್ಯುಸಿನೆಸ್ ವ್ಯವಹಾರದ ಬಗ್ಗೆಯೂ ಸ್ವತಃ ವೇಣುಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ಇದೀಗ ವೈರಲ್ ಆಗುತ್ತಿದೆ.
ನಾನು ಸತ್ಯಗಳನ್ನು ಮಾತ್ರ ಮಾತನಾಡುತ್ತೇನೆ. ಬೇರೆಯವರ ಅನುಕೂಲಕ್ಕಾಗಿ ನಾನು ನನ್ನ ಮಾತು ಬದಲಾಯಿಸುವುದಿಲ್ಲ ಎಂದಿದ್ದಾರೆ. ಇನ್ನು ಸ್ವತಃ ನನ್ನ ಜಾತಕದ ಪ್ರಕಾರ ನನಗೆ ಮದ್ಯದ ವ್ಯಾಪಾರ ಲಾಭದಾಯಕವಾಗಿದೆ ಎಂದಿದೆ. ಅದಕ್ಕಾಗಿಯೇ ನಾನು ಅಂತಹ ವ್ಯವಹಾರವನ್ನು ಮಾಡುತ್ತಿದ್ದೇನೆ ಎಂದಿದ್ದಾರೆ. ಹೈದರಾಬಾದ್ ನಲ್ಲಿ ವೇಣುಸ್ವಾಮಿ ಅವರು ಕೆಲ ಸ್ನೇಹಿತರೊಂದಿಗೆ ಕೂಡಿ ಪಬ್ ವೊಂದನ್ನು ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.