ನ್ಯೂಯಾರ್ಕ್: ಟೆಕ್ ಜಗತ್ತಿನ ದೈತ್ಯ ಇನ್ಫೋಸಿಸ್ ಬಗ್ಗೆ ಕೇಳದವರೇ ಇಲ್ಲವೆನ್ನಬಹುದೇನೋ. ತಾಂತ್ರಿಕ ನಿಪುಣತೆ ಹಾಗೂ ಹಿರಿಮೆಯನ್ನು ಜಗತ್ತಿಗೆ ತಿಳಿಸಿಕೊಡುವುದಲ್ಲದೆ ಭಾರತ ಹೆಮ್ಮೆ ಪಡುವಂತಹ ಐಟಿ ಸಂಸ್ಥೆಯಾಗಿ ಹೊರಹೊಮ್ಮಿರುವ ಇನ್ಫೋಸಿಸ್ನ ಮೂಲ ಸ್ಥಾಪಕರಾಗಿರುವ ನಾರಾಯಣ ಮೂರ್ತಿ ಅವರಂತೆಯೇ ಅವರ ಮಗನೀಗ ಮುನ್ನೆಲೆಗೆ ಬಂದಿದ್ದಾರೆ. 39ರ ಪ್ರಾಯದ ರೋಹನ್ ಮೂರ್ತಿ ಈಗ ತಂದೆಯ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ.
ಅವರ ಸಾರಥ್ಯದಲ್ಲಿ ಸೊರೊಕೋ ಸಂಸ್ಥೆ ಹೊರಹೊಮ್ಮಿದೆ. ತನ್ನದೆ ಆದ ವಿಶಿಷ್ಟ ಬಗೆಯ ಕಾರ್ಯತಂತ್ರ ಹೊಂದುವ ಮೂಲಕ ಐಟಿ ಕ್ಷೇತ್ರದಲ್ಲಿ ವಿಶೇಷವಾಗಿ ಮನ್ನಣೆ ಗಳಿಸುವತ್ತ ಹೆಜ್ಜೆ ಹಾಕಿದೆ ಈ ಸಂಸ್ಥೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ರೋಹನ್ ಅವರ ಸ್ಟಾರ್ಟಪ್ ಸಂಸ್ಥೆ ಇದಾಗಿದ್ದು, ಟೊಯೋಟಾ ಸಂಸ್ಥೆಯ ತ್ಯಾಜ್ಯ ನಿರ್ವಹಣೆಯ ಕಾರ್ಯಪ್ರಣಾಳಿಕೆಗೆ ಸಮಾನಾಂತರವಾಗಿ ಕೆಲವು ಕಾರ್ಯ ತಂತ್ರಗಳನ್ನು ಹೊಂದಿದೆ.
ಐಟಿ ವಲಯದಲ್ಲಿ ತಂತ್ರಾಂಶ ಬಳಸುವುದಕ್ಕೆ ಕುರಿತಂತೆ ಅದನ್ನು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸಬಹುದು, ವ್ಯರ್ಥ ಎನ್ನಬಹುದಾದ ಎಷ್ಟು ಡೇಟಾಗಳನ್ನು ತೆಗೆದುಹಾಕಬಹುದು ಹಾಗೂ ಪುನರಾವರ್ತಿತವಾಗುವ ಹಲವು ಟಾಸ್ಕುಗಳಿಗೆ ಹೇಗೆ ಏಕ ರೀತಿಯಲ್ಲಿ ಪರಿಣಾಮಕಾರಿತ್ವವನ್ನು ನೀಡಬಹುದು ಎಂಬುದರ ವಿಸ್ತೃತ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಅದಕ್ಕೆ ಪರಿಹಾರ ನೀಡುವಲ್ಲಿ ಸೊರೊಕೋ ನಿರತವಾಗಿದೆ.
ಸದ್ಯ ಸೊರೊಕೋ, ಔಷಧಿ ತಯಾರಕ ಬೇಯರ್ ಎಜಿ, ಇಂಜಿನಿಯರಿಂಗ್ ವಲಯದ ರಾಬರ್ಟ್ ಬಾಶ್, ಪೆಟ್ ಫುಡ್ ಮತ್ತು ಕ್ಯಾಂಡಿ ತಯಾರಕ ಮಾರ್ಸ್ ಇಂಕ್ ಹಾಗೂ ಕೆಲವು ವಾಲ್ ಸ್ಟ್ರೀಟ್ ಬ್ಯಾಂಕುಗಳು ಮತ್ತು ಹಲವು ರಿಟೈಲರ್ ಗಳನ್ನು ತನ್ನ ಗ್ರಾಹಕರನ್ನಾಗಿ ಹೊಂದಿದೆ.