ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗಲು ಸರ್ಕಾರಗಳು ಬಿಪಿಎಲ್ ಕಾರ್ಡ್ ಮೂಲಕ ಪಡಿತರ ವಿತರಣೆ ಮಾಡುತ್ತಿದೆ. ಆದರೆ ಕೆಲವರು ತಾವು ಅನುಕೂಲ ಸ್ಥಿತಿಯಲ್ಲಿದ್ದರೂ ಸಹ ಸುಳ್ಳು ಮಾಹಿತಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆಯುತ್ತಿದ್ದು, ಅಂತಹ ಕಾರ್ಡುಗಳನ್ನು ರದ್ದು ಮಾಡಲು ಈಗ ಕ್ರಮ ಕೈಗೊಳ್ಳಲಾಗುತ್ತಿದೆ.
ಜೀವನೋಪಾಯಕ್ಕೆ ಟ್ಯಾಕ್ಸಿಯಾಗಿ ವಾಹನ ಹೊಂದಿರುವವರನ್ನು ಹೊರತುಪಡಿಸಿ ಸ್ವಂತ ಬಳಕೆಗೆ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎಂದು ಪರಿಗಣಿಸಲಾಗಿದ್ದು, ಇದೀಗ ಇಂತಹ ವಾಹನಗಳ ಮಾಹಿತಿ ನೀಡುವಂತೆ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಸಾರ್ವಜನಿಕ ವಲಯದ ಸಂಸ್ಥೆಗಳು ಅಥವಾ ಸರ್ಕಾರದ ನೆರವಿನ ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವವರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಗಿಂತ ಅಧಿಕ ಭೂಮಿ ಹೊಂದಿರುವ ಕುಟುಂಬಗಳು ಹಾಗೂ 1.2 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎಂದು ಪರಿಗಣಿಸಲಾಗಿದ್ದು, ಇದನ್ನು ಪರಿಶೀಲಿಸಿ ಅಂಥವರ ಕಾರ್ಡ್ ರದ್ದುಗೊಳಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.