ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡುವ ಮುನ್ನ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಭಾರತೀಯ ಕ್ರಿಕೆಟ್‌ನ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮನ್ನು ಏಕದಿನದ ತಂಡದ ನಾಯಕತ್ವದಿಂದ ಹೊರತೆಗೆದ ವಿಚಾರವಾಗಿ ಪ್ರತಿಕ್ರಿಯಿಸುವ ವೇಳೆ, “ಅಲ್ಲಿ ಸಂಪರ್ಕವೇ ಇರಲಿಲ್ಲ,” ಎಂದಿರುವುದು ಬಹಳಷ್ಟು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ರೋಹಿತ್ ಶರ್ಮಾ ನಾಯಕರಾಗುವುದು ತಮಗೆ ಸಮಸ್ಯೆ ಏನಿಲ್ಲವೆಂದ ಕೊಹ್ಲಿ, ತಮ್ಮನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿದ್ದು ಬೇಸರವೇನಿಲ್ಲ ಎಂದಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ತಮಗಾವ ಭಿನ್ನಭಿಪ್ರಾಯಗಳೂ ಇಲ್ಲವೆಂದ ಕೊಹ್ಲಿ, ತಮ್ಮನ್ನು ನಾಯಕತ್ವ ಸ್ಥಾನದಿಂದ ತೆಗೆದುಹಾಕಿರುವುದು ಏಕೆಂದು ಅರ್ಥ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
“ಟಿ20 ನಾಯಕತ್ವದಿಂದ ಹಿಂದೆ ಸರಿಯಲು ನಾನು ನಿರ್ಧರಿಸಿ ಬಿಸಿಸಿಐಗೆ ನನ್ನ ಆಲೋಚನೆಯನ್ನು ತಿಳಿಸಿದಾಗ, ಅದನ್ನು ಚೆನ್ನಾಗಿ ಸ್ವೀಕರಿಸಲಾಯಿತು. ಅಲ್ಲಿ ಯಾವುದೇ ರೀತಿಯ ಹಿಂಜರಿಕೆ ಇರಲಿಲ್ಲ, ನನ್ನ ನಿರ್ಧಾರವನ್ನು ಮತ್ತೊಮ್ಮೆ ಆಲೋಚಿಸಲು ಸಹ ಹೇಳಲಿಲ್ಲ. ಅದನ್ನು ಚೆನ್ನಾಗಿ ಸ್ವೀಕರಿಸಲಾಯಿತು. ಇದು ಪ್ರಗತಿಶೀಲವಾದ ಹೆಜ್ಜೆಯಾಗಿದ್ದು, ಸರಿಯಾದ ದಿಕ್ಕಿನಲ್ಲಿ ಇಡಲಾಗಿದೆ ಎಂದು ನನಗೆ ಹೇಳಲಾಯಿತು.
SHOCKING: ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಅತ್ಯಾಚಾರ, ಕಾಮುಕ ಅರೆಸ್ಟ್
ಇದಾದ ಬಳಿಕ, ಆಯ್ಕೆದಾರರಿಗೆ ಅನ್ಯ ಆಲೋಚನೆ ಇಲ್ಲದಿದ್ದಲ್ಲಿ ನನಗೆ ಟೆಸ್ಟ್ ಹಾಗೂ ಏಕದಿನಗಳಲ್ಲಿ ನಾಯಕನಾಗಿ ಮುಂದುವರೆಯಲು ಇಷ್ಟವಿದೆಯೆಂದು ತಿಳಿಸಿದೆ. ನನಗೆ ಏನು ಮಾಡಬೇಕಿತ್ತು ಎನಿಸುವುದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ನನ್ನನ್ನು ನಾಯಕತ್ವದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಆಯ್ಕೆಯನ್ನು ನಾನು ಅವರಿಗೇ ಬಿಟ್ಟೆ,” ಎಂದು ಕೊಹ್ಲಿ ತಿಳಿಸಿದ್ದಾರೆ.
ಟೀಂ ಇಂಡಿಯಾ ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಶೀತಲಸಮರ ಇರುವ ಊಹಾಪೂಹಗಳು ಕಳೆದ ಒಂದು ವಾರದಿಂದ ನಡೆಯುತ್ತಿರುವ ಅಸ್ಪಷ್ಟ ಘಟನಾವಳಿಗಳು ಎಡೆ ಮಾಡಿಕೊಟ್ಟಿವೆ.
ಕೊಹ್ಲಿ ಹೇಳಿಕೆ ಕೊಟ್ಟ ಗಂಟೆಗಳ ಬಳಿಕ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, “ಸೆಪ್ಟೆಂಬರ್‌ನಲ್ಲಿ ಕೊಹ್ಲಿಯೊಂದಿಗೆ ಮಾತನಾಡಿದ್ದ ನಾವು, ಟಿ20 ನಾಯಕತ್ವದಿಂದ ಇಳಿಯದಿರಲು ಕೋರಿಕೊಂಡಿದ್ದೆವು. ಕೊಹ್ಲಿ ಟಿ20 ನಾಯಕತ್ವವನ್ನು ತಾವಾಗಿಯೇ ಬಿಟ್ಟುಕೊಟ್ಟ ಬಳಿಕ, ಬಿಳಿ ಚೆಂಡಿನ ಆಟಕ್ಕೆ ಇಬ್ಬರು ನಾಯಕರನ್ನು ಹೊಂದುವುದು ಕಷ್ಟವೆನಿಸಿತು. ಸಭೆ ಸೇರಿದ ದಿನದ ಬೆಳಿಗ್ಗೆ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿರುವ ವಿಚಾರವನ್ನು ಆಯ್ಕೆದಾರರ ಚೇರ್ಮನ್ ಚೇತನ್ ಶರ್ಮಾ ನಮಗೆ ತಿಳಿಸಿದರು,” ಎಂದಿದ್ದಾರೆ.
ಶತಮಾನದ ಆರಂಭದಲ್ಲಿ ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾಗಿ ಹೊಸ ಅಧ್ಯಾಯ ಬರೆದಿದ್ದ ಸೌರವ್ ಗಂಗೂಲಿ ಎರಡು ದಶಕಗಳ ಬಳಿಕ ಬಿಸಿಸಿಐನ ಅಧ್ಯಕ್ಷ ಗಾದಿಗೆ ಬಂದ ಬಳಿಕ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡು ಸುದ್ದಿಯಲ್ಲಿದ್ದಾರೆ. ಇದೀಗ ಗಂಗೂಲಿ ಹಾಗೂ ಕೊಹ್ಲಿ ನಡುವಿನ ಈ ಇಂಟರೆಸ್ಟಿಂಗ್ ಆಗಿರುವ ಪರೋಕ್ಷ ಸಮಾಲೋಚನೆಯಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎನ್ನುವುದೇ ಅರ್ಥವಾಗುತ್ತಿಲ್ಲ.