ಕೋವಿಡ್-19ನ ಒಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ತಡೆಯುವ ಸಲುವಾಗಿ ತಮ್ಮ ದೇಶದಲ್ಲಿ ತರಲಾದ ಹೊಸ ನಿರ್ಬಂಧಗಳ ಕಾರಣದಿಂದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಖುದ್ದು ತನ್ನ ಮದುವೆಯನ್ನು ರದ್ದುಗೊಳಿಸಿದರು.
41 ವರ್ಷ ವಯಸ್ಸಿನ ಆರ್ಡೆನ್ ತಮ್ಮ ವಿವಾಹದ ದಿನಾಂಕವನ್ನು ಘೋಷಿಸದಿದ್ದರೂ, ಮುಂದಿನ ಕೆಲವು ವಾರಗಳಲ್ಲಿ ಮದುವೆಯಾಗಲಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
“ನನ್ನ ಮದುವೆಯ ಕಾರ್ಯಕ್ರಮ ಮುಂದೆ ಹೋಗುತ್ತಿಲ್ಲ, ಸಾಂಕ್ರಾಮಿಕದ ಸಂಕಷ್ಟದಲ್ಲಿ ಸಿಲುಕಿರುವ ನ್ಯೂಜಿಲೆಂಡ್‌ನ ಮಂದಿಯಲ್ಲಿ ನಾನು ಒಬ್ಬಳಾಗಿ ಸೇರುತ್ತೇನೆ” ಎಂದು ಆರ್ಡೆನ್ ಭಾನುವಾರ (ಜನವರಿ 23) ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನ್ಯೂಜಿಲೆಂಡ್‌ನ ಉತ್ತರದಿಂದ ದಕ್ಷಿಣ ದ್ವೀಪಗಳಿಗೆ ಒಮಿಕ್ರಾನ್ ಪ್ರಕರಣಗಳು ಪಸರಿದ ವಿಚಾರ ವರದಿಯಾದ ನಂತರ ನ್ಯೂಜಿಲೆಂಡ್ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ವಿಧಿಸಿದೆ.
2017 ರಲ್ಲಿ, ತನ್ನ 37 ನೇ ವಯಸ್ಸಿನಲ್ಲಿಯೇ ಪ್ರಧಾನಿ ಗಾದಿಗೆ ಏರುವ ಮೂಲಕ, ಸರ್ಕಾರದ ಮುಖ್ಯಸ್ಥೆ ಹುದ್ದೆಗೇರಿದ ವಿಶ್ವದ ಅತ್ಯಂತ ಕಿರಿಯ ಮಹಿಳೆ ಎಂಬ ಶ್ರೇಯಕ್ಕೆ ಭಾಜನರಾದ ಜಸಿಂಡಾ, ಜಗತ್ತಿನಾದ್ಯಂತ ತಮ್ಮ ಕೆಲವೊಂದು ನಿರ್ಣಯಗಳಿಂದ ಸುದ್ದಿ ಮಾಡಿದ್ದಾರೆ.
1980ರ ಜುಲೈ 26ರಂದು ಜನಿಸಿದ ಜಸಿಂಡಾ, 2001ರಲ್ಲಿ ಸಂಪರ್ಕ ಅಧ್ಯಯನದಲ್ಲಿ ಪದವೀಧರೆಯಾಗಿದ್ದಾರೆ. ಇದಾದ ಬಳಿಕ ಕೆಲಸದ ಅನುಭವಕ್ಕಾಗಿ ವಿದೇಶಗಳಿಗೂ ತೆರಳಿದ್ದ ಜೆಸಿಂಡಾ ಈ ಅವಧಿಯಲ್ಲಿ, ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ರ ಸಂಪುಟ ಕಚೇರಿಯಲ್ಲಿ ಎರಡೂವರೆ ವರ್ಷ ಕೆಲಸ ಮಾಡಿದ್ದಾರೆ.
ಪ್ರಧಾನಿಯಾಗುವ ಮುನ್ನ ಆರ್ಡೆನ್, ಮಾನವ ಹಕ್ಕುಗಳ ಪ್ರತಿಪಾದಕ ಸಂಘಟನೆ ದಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸೋಷಿಯಲಿಸ್ಟ್ ಯೂತ್‌ನ ಅಧ್ಯಕ್ಷೆಯೂ ಆಗಿದ್ದರು.
2008ರಲ್ಲಿ, ತಮ್ಮ 28ನೇ ವಯಸ್ಸಿನಲ್ಲೆ ಜಸಿಂಡಾರನ್ನು ಇಲ್ಲಿನ ವಾಯ್ಕಾಟೋ ಜಿಲ್ಲೆಯ ಸಂಸತ್ ಪ್ರತಿನಿಧಿಯ ಅಭ್ಯರ್ಥಿಯಾಗಿ ಲೇಬರ್ ಪಕ್ಷ ಆರಿಸಿತ್ತು.
ಜೆಸೆಂಡಾ ಸದ್ಯ ಟಿವಿ ನಿರೂಪಕ ಕ್ಲಾರ್ಕ್ ಗೇಫೋರ್ಡ್ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ. ಈ ಜೋಡಿ ಮೊದಲ ಬಾರಿಗೆ 2012ರಲ್ಲಿ ಭೇಟಿಯಾಗಿದ್ದು, ಕೆಲ ದಿನಗಳ ಡೇಟಿಂಗ್ ಬಳಿಕ ತಮ್ಮ ಮಗಳನ್ನು 2018ರಲ್ಲಿ ಭೂಮಿಗೆ ಸ್ವಾಗತಿಸಿದ್ದಾರೆ.
ಮೇ 03, 2019ರಲ್ಲಿ ಕ್ಲಾರ್ಕ್ ಮತ್ತು ಆರ್ಡೆನ್ ನಿಶ್ಚಿತಾರ್ಥವಾಗಿದ್ದು, ಈ ವರ್ಷ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೋವಿಡ್ ಕಾರಣದಿಂದ ಇಬ್ಬರ ಮದುವೆ ಕಾರ್ಯಕ್ರಮ ಹಾಗೇ ಉಳಿದುಕೊಂಡಿದೆ.
ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮವಿತ್ತ ಎರಡನೇ ಚುನಾಯಿತ ನಾಯಕಿ ಎಂಬ ಶ್ರೇಯಕ್ಕೆ ಜೆಸಿಂಡಾ 2018ರಲ್ಲಿ ಭಾಜನರಾಗಿದ್ದರು.