ನವದೆಹಲಿ: ಕರ್ನಾಟಕದಲ್ಲಿ ಇದೀಗ ಚುನಾವಣೆಯ ಕಾವು. ಈ ಹೊತ್ತಿನಲ್ಲಿ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಬಗ್ಗೆ ಚರ್ಚೆ ಶುರುವಾಗಿದೆ. ಇವರ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ. 500 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಇವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಸಿಎಂ ಎನ್ನಲಾಗಿದೆ.
ಈ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ತಿಳಿಸಿದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ ನಂತರ ಈ ವರದಿಯನ್ನು ಎಡಿಆರ್ ಬಿಡುಗಡೆ ಮಾಡಿದೆ.
ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮುಖ್ಯಮಂತ್ರಿಗಳು ಕೋಟ್ಯಧೀಶರು. ಪ್ರತಿ ಮುಖ್ಯಮಂತ್ರಿ ಸರಾಸರಿ ಆಸ್ತಿ 33.96 ಕೋಟಿ ರೂ. 30 ಮುಖ್ಯಮಂತ್ರಿಗಳು, ಅವರ ಸ್ವಯಂ ಪ್ರಮಾಣ ಪತ್ರದ ಅಫಿಡವಿಟ್‌ಗಳ ಆಧಾರದ ಮೇಲೆ ಈ ವರದಿ ವಿಶ್ಲೇಷಿಸಲ್ಪಟ್ಟಿದ್ದು, ಅರುಣಾಚಲ ಪ್ರದೇಶದ ಸಿಎಂ ಪೇಮಾ ಖಂಡು 163 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಒಡಿಶಾ ಸಿಎಂ ನವೀನ್ ಪಟ್ನಾಯಕ್ 63 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು 1 ಕೋಟಿ ರೂಪಾಯಿ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಇನ್ನು 15 ಲಕ್ಷ ರೂಪಾಯಿ ಆಸ್ತಿ ಹೊಂದಿರುವ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂದು ಎಡಿಆರ್ ವರದಿ ತಿಳಿಸಿದೆ.