ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂದು ಬಹಳ ರಿಸ್ಕ್ ತೆಗೆದುಕೊಂಡು ಸಣ್ಣದೊಂದು ಬಂಡವಾಳದೊಂದಿಗೆ ಉದ್ಯಮ ಆರಂಭಿಸಿ ಅದು ಶತಕೋಟಿಗಳ ಲೆಕ್ಕದಲ್ಲಿ ಬೆಳೆದ ಅನೇಕ ಯಶೋಗಾಥೆಗಳನ್ನು ಮನುಕುಲ ಕಂಡಿದೆ.
ಇಂಥದ್ದೇ ಸಾಲಿಗೆ ಸೇರುವ ವ್ಯಕ್ತಿ ಗುಜರಾತಿನ ಅಮ್ರೇಲಿಯ ದಿಲೀಪ್ ಸಾಂಘ್ವಿ. ಭಾರತದ ಆರೋಗ್ಯಸೇವಾ ಕ್ಷೇತ್ರದಲ್ಲಿ ಕ್ರಾಂತಿ ತಂದ ಸಣ್ ಫಾರ್ಮಾಕ್ಯೂಟಿಕ್ ಸಮೂಹದ ಸ್ಥಾಪಕ ಈ ದಿಲೀಪ್ ಸಾಂಘ್ವಿ.
ವಾರ್ಷಿಕ $4.5 ಶತಕೋಟಿಯ ವ್ಯವಹಾರ ನಡೆಸುವ ಸನ್ ಫಾರ್ಮಾದ ಸ್ಥಾಪಕ ಹಾಗೂ ಎಂಡಿ ಆಗಿರುವ ದಿಲೀಪ್ ಸಾಹಸಗಾಥೆಯ ಫೋರ್ಬ್ಸ್ ನಿಯತಕಾಲಿಕೆಯಲ್ಲಿ ವರದಿಯಾಗಿದೆ.
ದಿಲೀಪ್ ತಂದೆ ಕೋಲ್ಕತ್ತಾದಲ್ಲಿ ಫಾರ್ಮ ವಿತರಕರಾಗಿದ್ದರು. ತಮ್ಮ ತಂದೆಯ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ದಿಲೀಪ್‌ಗೆ ತಮ್ಮದೇ ಫಾರ್ಮಾ ಕಂಪನಿ ಸ್ಥಾಪಿಸುವ ಆಶಯ ಹುಟ್ಟಿಕೊಂಡಿತ್ತು. ತಮ್ಮ ಕನಸನ್ನು ಬೆನ್ನೇರಿದ ದಿಲೀಪ್ 1983ರಲ್ಲಿ ತಮ್ಮ ತಂದೆಯಿಂದ 10,000ರೂ.ಗಳನ್ನು ಪಡೆದು ತಮ್ಮ 27ನೇ ವಯಸ್ಸಿನಲ್ಲಿಯೇ ಉದ್ಯಮ ಸ್ಥಾಪಿಸುತ್ತಾರೆ. ಸೈಕಿಯಾಟ್ರಿಕ್ ಡ್ರಗ್‌ಗಳ ಉತ್ಪಾದನೆಯೊಂದಿಗೆ ತನ್ನ ಕೆಲಸ ಆರಂಭಿಸಿದ ಸನ್ ಫಾರ್ಮಾ ಅಲ್ಲಿಂದ ಹಿಂದಿರುಗಿ ನೋಡೇ ಇಲ್ಲ.
ಇಂದು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸ್ಪೆಷಲಿಸ್ಟ್ ಜನರಿಕ್ ಫಾರ್ಮಾ ಸಂಸ್ಥೆಯಾಗಿದೆ ಸನ್. 40 ಉತ್ಪಾದನಾ ಘಟಕಗಳನ್ನು ಹೊಂದಿರುವ ಸನ್, ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಮದ್ದುಗಳನ್ನು 100ಕ್ಕೂ ಹೆಚ್ಚು ದೇಶಗಳಿಗೆ ಪೂರೈಕೆ ಮಾಡುತ್ತಿದೆ.
ದಿಲೀಪ್‌ರ ಉದ್ಯಮಶೀಲ ಚುರುಕುತನ ಹಾಗೂ ಸಾಹಸೀ ಮನೋಭಾವದಿಂದಾಗಿ 1997ರಲ್ಲಿ ಅಮೆರಿಕದ ಕಾರಕಾವೋ ಫಾರ್ಮಾವನ್ನು, 2007ರಲ್ಲಿ ಇಸ್ರೇಲಿನ ಟಾರೋ ಫಾರ್ಮಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಸನ್, 2014ರಲ್ಲಿ ರ‍್ಯಾನ್‌ಬ್ಯಾಕ್ಸಿ ಲ್ಯಾಬೋರೇಟರೀಸ್‌ಅನ್ನು ತನ್ನೊಂದಿಗೆ ವಿಲೀನ ಮಾಡಿಕೊಂಡಿದೆ.
ಐಐಟಿ-ಬಾಂಬೆಯ ಆಡಳಿತಗಾರರ ಮಂಡಳಿ ಸದಸ್ಯರಾದ ದಿಲೀಪ್‌ಗೆ 2016ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ಕೊಟ್ಟು ಗೌರವಿಸಿದೆ. 2018ರಲ್ಲಿ ರಿಸರ್ವ್ ಬ್ಯಾಂಕ್‌ನ 21- ಸದಸ್ಯ ಬಲದ ಕೇಂದ್ರ ಮಂಡಲಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ದಿಲೀಪ್.
ಗುಜರಾತಿನ ಅಮ್ರೇಲಿಯಲ್ಲಿ 1955ರಲ್ಲಿ ಜನಿಸಿದ ದಿಲೀಪ್, ಕಲ್ಕತ್ತಾ ವಿವಿಯಲ್ಲಿ ಪದವಿ ಪೂರೈಸಿದ್ದಾರೆ. 21, ಜೂನ್, 2023ರಂತೆ ದಿಲೀಪ್‌ರ ಒಟ್ಟಾರೆ ಆಸ್ತಿಯ ಮೌಲ್ಯ $16.2 ಶತಕೋಟಿ ಎಂದು ಫೋರ್ಬ್ಸ್ ವರದಿ ಮಾಡಿದೆ.