ದೆಹಲಿಯ ಮೋಸ್ಟ್ ವಾಂಟೆಡ್ ದರೋಡೆಕೋರರಲ್ಲಿ ಒಬ್ಬನಾದ ದೀಪಕ್ ಬಾಕ್ಸರ್ ಅನ್ನು ಡೆಲ್ಲಿ ಪೊಲೀಸ್ ವಿಶೇಷ ಸೆಲ್ ತಂಡ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಸಹಾಯದಿಂದ ಮೆಕ್ಸಿಕೋದಲ್ಲಿ ಮಂಗಳವಾರ ಬಂಧಿಸಿದೆ.
ಅವನನ್ನು ಬಂಧಿಸಲು ದೆಹಲಿ ಪೊಲೀಸರ ವಿಶೇಷ ಸೆಲ್ ತಂಡ ಕಳೆದೆರಡು ದಿನಗಳಿಂದ ಅಲ್ಲಿಯೇ ಮೊಕ್ಕಾಂ ಹೂಡಿತ್ತು ಎಂದು ಹಿರಿಯ ವಿಶೇಷ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಸಹಾಯದಿಂದ ದರೋಡೆಕೋರನನ್ನು ಬಂಧಿಸಲು ದೆಹಲಿ ಪೊಲೀಸರು ಭಾರತದ ಹೊರಗೆ ಹೋಗಿದ್ದು ಇದೇ ಮೊದಲು.
ಹಾಗಾದರೆ ಯಾರು ಈ ದೀಪಕ್ ? ಈತನ ಹಿನ್ನೆಲೆಯೇನು ಅಂತ ನೋಡೋದಾದ್ರೆ, 27 ವರ್ಷದ ದೀಪಕ್ ಬಾಕ್ಸರ್ ಹರಿಯಾಣದ ಗನ್ನೌರ್ ನಿವಾಸಿ. ಈತ ದೆಹಲಿಯ ಮೋಸ್ಟ್ ವಾಂಟೆಡ್ ದರೋಡೆಕೋರ. 2016 ರಲ್ಲಿ ಹರ್ಯಾಣದಲ್ಲಿ ಪೊಲೀಸ್ ಕಸ್ಟಡಿಯಿಂದ ದರೋಡೆಕೋರ ಜಿತೇಂದರ್ ಅಲಿಯಾಸ್ ಗೋಗಿಯನ್ನು ಎಸ್ಕೇಪ್ ಮಾಡಿಸಿದ ವೇಳೆ ಈತ ಬೆಳಕಿಗೆ ಬಂದಿದ್ದ.
ಜಿತೇಂದರ್ ಗೋಗಿ ಸಾವಿನ ನಂತರ ದೀಪಕ್ ಆತನ ಗ್ಯಾಂಗ್ ಅನ್ನು ಮುನ್ನಡೆಸುತ್ತಿದ್ದನು. ಜೈಲಿನಲ್ಲಿರುವ ತನ್ನ ಗ್ಯಾಂಗ್ ಸದಸ್ಯರ ಸಹಾಯದಿಂದ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಅಮಿತ್ ಗುಪ್ತಾ ಎಂಬ ಬಿಲ್ಡರ್ ನ ಹತ್ಯೆ ಪ್ರಕರಣದಲ್ಲಿ 2022ರ ಸೆಪ್ಟೆಂಬರ್ ನಿಂದ ದೀಪಕ್ ಬಾಕ್ಸರ್ ಗಾಗಿ ಹುಡುಕಾಟ ನಡೆದಿತ್ತು. ಈತನನ್ನ ಇದೀಗ ಬಂಧಿಸಿರೋದಕ್ಕೆ ದೆಹಲಿ ಪೊಲೀಸರಿಗೆ 3 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.