ಜಿನೇವಾ: ವಿಶ್ವ ಆರೋಗ್ಯ ಸಂಸ್ಥೆ ಫಿಜರ್ ಬಯೋನ್ ಟೆಕ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ವಿಶ್ವದಾದ್ಯಂತ ಅನೇಕ ದೇಶಗಳಿಗೆ ಲಸಿಕೆಯ ಆಮದು ಮತ್ತು ವಿತರಣೆಯನ್ನು ತ್ವರಿತವಾಗಿ ಅನುಮೋದಿಸಲು ಇದರಿಂದ ಅನುಕೂಲವಾಗಿದೆ.
ಅಮೆರಿಕ, ಜರ್ಮನ್ ಲಸಿಕೆಯೊಂದಿಗೆ ಡಿಸೆಂಬರ್ 8 ರಂದು ಬ್ರಿಟನ್ ನಲ್ಲಿ ಲಸಿಕೆಯ ಡ್ರೈವ್ ಆರಂಭಿಸಲಾಗಿದೆ. ಅಮೆರಿಕ, ಕೆನಡಾ ಸೇರಿ ಅನೇಕ ದೇಶಗಳು ಇದನ್ನು ಅನುಸರಿಸಿವೆ. ಕಳೆದ ಒಂದು ವರ್ಷದ ಹಿಂದೆ ಚೀನಾದಲ್ಲಿ ಕೊರೋನಾ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡ ನಂತರ ಫಿಜರ್ ಬಯೋನ್ ಟೆಕ್ ಲಸಿಕೆ ತುರ್ತು ಅನುಮೋದನೆ ಪಡೆದ ಮೊದಲ ಲಸಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೋವಿಡ್-19 ಲಸಿಕೆಗಳಿಗೆ ಖಾತರಿಪಡಿಸುವ ನಿಟ್ಟಿನಲ್ಲಿ ಅತ್ಯಂತ ಸಕಾರಾತ್ಮಕ ಹೆಜ್ಜೆ ಇದಾಗಿದೆ. ಜನಸಂಖ್ಯೆಯ ಅಗತ್ಯತೆಗೆ ಅನುಗುಣವಾಗಿ ಲಸಿಕೆಯನ್ನು ಪೂರೈಸಲು ಇನ್ನೂ ಹೆಚ್ಚಿನ ಪ್ರಯತ್ನವನ್ನು ಕೈಗೊಳ್ಳಬೇಕಿದೆ ಎಂದು ವಿಶ್ವಸಂಸ್ಥೆಯ ಉನ್ನತ ಆರೋಗ್ಯಾಧಿಕಾರಿ ಮರಿಯಾಂಜೆಲಾ ಸಿಮಾವೋ ಹೇಳಿದ್ದಾರೆ.
ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟದ ಡೇಟಾವನ್ನು ಪರಿಶೀಲಿಸಿದ ಬಳಿಕ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಔಷಧ ನಿಯಂತ್ರಕ ಏಜೆನ್ಸಿಯನ್ನು ಹೊಂದಿರುವ ಪ್ರತಿ ದೇಶವೂ ಯಾವುದೇ ಕೋವಿಡ್-19 ಲಸಿಕೆಗಾಗಿ ತನ್ನದೇ ಆದ ಅನುಮೋದನೆಯನ್ನು ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.