
ಇಂದಿನ ಕಾಲದಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿ ಕೊಳ್ಳಲಾಗುತ್ತದೆ. ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯಲು ಅನೇಕರು ಇಷ್ಟಪಡ್ತಾರೆ. ಆದ್ರೆ ದಂಪತಿ ಮಧ್ಯೆ ಬಿರುಕು ಮೂಡಿ ವಿಚ್ಛೇದನ ಪಡೆದಾಗ ಸಾಮಾನ್ಯವಾಗಿ ಮಕ್ಕಳನ್ನು ಯಾರಿಗೆ ಕೊಡಬೇಕು ಎಂಬ ಚರ್ಚೆ ಕೋರ್ಟ್ ನಲ್ಲಿ ನಡೆಯುತ್ತದೆ. ಕೋರ್ಟ್ ತೀರ್ಪಿನಂತೆ ಪಾಲಕರು ನಡೆದುಕೊಳ್ಳಬೇಕಾಗುತ್ತದೆ. ಆದ್ರೆ ಸಾಕುಪ್ರಾಣಿಯನ್ನು ಯಾರು ನೋಡಿಕೊಳ್ಬೇಕು ಎಂಬ ಪ್ರಶ್ನೆ ಕೂಡ ಕಾಡುತ್ತದೆ. ಸ್ಪೇನ್ ಈ ಸಮಸ್ಯೆಗೆ ಅಂತ್ಯ ಹಾಡಿದೆ.
ಸ್ಪೇನ್‌ನಲ್ಲಿ ಹೊಸ ಕಾನೂನು ಜಾರಿಗೆ ಬಂದಿದೆ. ಸಾಕು ಪ್ರಾಣಿಗಳನ್ನು ವಸ್ತುಗಳಂತೆ ಅಲ್ಲ ಜೀವಂತ, ಸಂವೇದಾಶೀಲ ಜೀವಿಗಳಂತೆ ಪರಿಗಣಿಸಲಾಗಿದೆ. ವಿಚ್ಛೇದನ ಪ್ರಕರಣಗಳಲ್ಲಿ ನಾಯಿ, ಬೆಕ್ಕು, ಗೋಲ್ಡ್ ಫಿಷ್, ಆಮೆ ಅಥವಾ ಯಾವುದೇ ಪಕ್ಷಿಯನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಈಗ ಪ್ರಾಣಿಗಳ ಯೋಗಕ್ಷೇಮವನ್ನು ಮತ್ತು ಕುಟುಂಬದ ಅಗತ್ಯಗಳನ್ನು ಪರಿಗಣಿಸಬೇಕಾಗುತ್ತದೆ.
ಸಾಕುಪ್ರಾಣಿಗಳು ಸಹ ಕುಟುಂಬದ ಸದಸ್ಯರು ಎಂದು ಕಾನೂನು ಹೇಳುತ್ತದೆ. ಈ ವಿಷ್ಯದಲ್ಲಿ ಸ್ಪೇನ್ ಈಗ ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ ಮತ್ತು ಪೋರ್ಚುಗಲ್‌ಗಳ ಗುಂಪಿಗೆ ಸೇರಿಕೊಂಡಿದೆ. ಸಾಕು ಪ್ರಾಣಿಗಳನ್ನು ಯಾರ ಕೈಗೆ ನೀಡುತ್ತೀರಿ ಅದಕ್ಕಿಂತ ಮೊದಲು ಅವರ ಹಿನ್ನಲೆ ನೋಡಬೇಕು. ಸಂಗಾತಿಗೆ ಹಿಂಸೆ ನೀಡಿದ ಪತಿ ಕೈಗೆ ಸಾಕು ಪ್ರಾಣಿ ಜವಾಬ್ದಾರಿ ನೀಡಬಾರದು ಎಂದು ಹೊಸ ಕಾನೂನಿನಲ್ಲಿ ಹೇಳಲಾಗಿದೆ.