ನವದೆಹಲಿ: ಕೊರೋನಾ ವೈರಸ್ ರೂಪಾಂತರಿಗಳಲ್ಲಿಯೇ ಅತ್ಯಂತ ಅಪಾಯಕಾರಿ ಎನ್ನಲಾದ ಡೆಲ್ಟಾ ಪ್ಲಸ್ ದೇಶದ ಅನೇಕ ರಾಜ್ಯಗಳಲ್ಲಿ ಭಾರಿ ಆತಂಕವನ್ನು ಉಂಟು ಮಾಡಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ.
ಈ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕರ್ನಾಟಕದಲ್ಲಿ ಎರಡು ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಕೋವಿಡ್ ರೂಪಾಂತರ ವೈರಸ್ ಆಗಿರುವ ಡೆಲ್ಟಾ ಪ್ಲಸ್ ಅತ್ಯಂತ ಅಪಾಯಕಾರಿಯಾಗಿದೆ. ಇದು ಕ್ಷಿಪ್ರವಾಗಿ ಹರಡುತ್ತದೆ. ದುರ್ಬಲ ವ್ಯಕ್ತಿಗಳನ್ನು ಸಾವಿಗೆ ದೂಡುವ ಸಾಮರ್ಥ್ಯ ಹೊಂದಿದೆ. ಲಸಿಕೆ ಪಡೆಯದವರಿಗೆ ಹೆಚ್ಚು ಅಪಾಯವನ್ನು ಉಂಟು ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡೆಲ್ಟಾ ಪ್ಲಸ್ ನಿಯಂತ್ರಣಕ್ಕೂ ಲಸಿಕೆ ಪರಿಣಾಮಕಾರಿಯಾಗಿದೆ. ಕೊವ್ಯಾಕ್ಸಿನ್, ಕೋವಿಶೀಲ್ಡ್ ಸೇರಿ ಕೋವಿಡ್ ಲಸಿಕೆಗಳು ತೀವ್ರ ರೋಗದ ಲಕ್ಷಣಗಳನ್ನು ತಡೆಯುತ್ತವೆ. ಆಸ್ಪತ್ರೆಗೆ ದಾಖಲಾಗುವುದನ್ನು ಕೂಡ ತಡೆಯುತ್ತದೆ. ಒಂದು ಡೋಸ್ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆ ಪಡೆದವರಲ್ಲಿ ಡೆಲ್ಟಾ ಪ್ಲಸ್ ಕಾಣಿಸಿಕೊಂಡರೂ ಚೇತರಿಕೆ ಕಾಣಬಹುದು. ಕೋವಿಡ್ ಲಸಿಕೆಗಳು ರೋಗದ ತೀವ್ರತೆ ತಡೆಯಲಿವೆ. ಎರಡು ಡೋಸ್ ಪಡೆದವರಲ್ಲಿ ಪ್ರತಿಕಾಯಗಳ ಸಾಮರ್ಥ್ಯ ವೃದ್ಧಿಯಾಗಿರುತ್ತದೆ ಎಂದು ಹೇಳಲಾಗಿದೆ.