ಮೇಕಪ್ ಸಾಧನಗಳನ್ನು ಕೊಳ್ಳುವಾಗ ನಮಗೆ ಸೂಕ್ತವಾದ ಮೇಕಪ್ ಯಾವುದೆಂದು ನಾವು ಯೋಚಿಸುವುದೇ ಇಲ್ಲ. ಎಷ್ಟೋ ಬಾರಿ ನಮ್ಮ ಫ್ರೆಂಡ್ ರೆಕಮಂಡ್ ಮಾಡುವ ಅಥವಾ ಸೆಲೆಬ್ರಿಟಿ ಬಳಸಿದ್ದಾರೆ ಎಂದು ಜಾಹೀರಾತಿನಲ್ಲಿ ಬರುವ ಮೇಕಪ್ ಕೊಂಡುಕೊಳ್ಳುತ್ತೇವೆ.
ಆದರೆ ಆಕರ್ಷಕವಾಗಿ ಕಾಣ ಬಯಸುವವರು ಮೇಕಪ್ ಕಿಟ್ ಕೊಳ್ಳುವಾಗ ತಮ್ಮ ವಯಸ್ಸಿಗೆ ಹೊಂದುವ ಮೇಕಪ್ ಕೊಂಡರೆ ಒಳ್ಳೆಯದು.
ಸಾಮಾನ್ಯವಾಗಿ ಸ್ಕಿನ್ ಟೋನ್‌ಗೆ ಹೊಂದುವ ಫೌಂಡೇಷನ್, ಲಿಪ್ ಸ್ಟಿಕ್ ಕೊಳ್ಳಬೇಕು ಎಂಬುದನ್ನು ಕೇಳಿರುತ್ತೀರಿ. ವಯಸ್ಸಿಗೂ – ಮೇಕಪ್ ಗೂ ಏನು ಸಂಬಂಧ ಎಂದು ನೋಡುವ ಬನ್ನಿ.
25 ವರ್ಷದ ಒಳಗಿನವರಿಗೆ
ಈ ವಯಸ್ಸಿನವರಿಗೆ ತೆಳು ಹಾಗೂ ಗಾಢ ಎರಡೂ ಬಗೆಯ ಮೇಕಪ್ ಸೂಟ್ ಆಗುತ್ತದೆ. ಈ ವಯಸ್ಸಿನಲ್ಲಿ ಯಾವುದೇ ಮೇಕಪ್ ಇಲ್ಲದಿದ್ದರೂ ಮುಖ ಆಕರ್ಷಕವಾಗಿ ಕಾಣುವುದು.
25-30 ವರ್ಷ
ಈ ಸಮಯದಲ್ಲಿ ತ್ವಚೆಯ ಆರೈಕೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ದಿನಾ ಸನ್‌ಸ್ಕ್ರೀನ್ ಲೋಷನ್ ಬಳಸುವುದರಿಂದ ಮುಖದ ಕಾಂತಿಯನ್ನು ಕಾಪಾಡಬಹುದು. ಫೌಂಡೇಷನ್ ಅಷ್ಟೇ ತೆಳುವಾಗಿರಲಿ. ಪಾರ್ಟಿ ಫಂಕ್ಷನ್ ಗಳಿಗೆ ಹೋಗುವಾಗ ಫೌಂಡೇಷನ್ ಹಚ್ಚಿ, ಕಣ್ಣಿಗೆ ಅಲಂಕಾರ ಮಾಡಿ, ಗಾಢವಾದ ಲಿಪ್ ಸ್ಟಿಕ್ ಬಳಸಿದರೆ ಆಕರ್ಷಕವಾಗಿ ಕಾಣುವಿರಿ. ದಿನಾ ಗಾಢವಾದ ಮೇಕಪ್ ಮಾಡುವುದರಿಂದ ತ್ವಚೆ ಹಾಳಾಗುತ್ತದೆ.
30-40 ವಯಸ್ಸು
ಈ ವಯಸ್ಸಿನವರಿಗೆ ತೆಳು ಮೇಕಪ್ ಹೆಚ್ಚು ಆಕರ್ಷಕವಾಗಿ ಕಾಣುವುದು. ಈ ವಯಸ್ಸಿನಲ್ಲಿ ತ್ವಚೆಯಲ್ಲಿ ಯೌವನದ ಕಳೆ ಕಡಿಮೆಯಾಗಿರುತ್ತದೆ. ಆಗ ಗಾಢವಾದ ಮೇಕಪ್ ಮಾಡಿದರೆ ವೇಷ ಕಟ್ಟಿದಂತೆ ಕಾಣುವುದು. ಈ ವಯಸ್ಸಿನವರು ಕಣ್ಣಿಗೆ ಕಾಡಿಗೆ, ತೆಳುವಾದ ಫೌಂಡೆಷನ್, ಗ್ಲೋಸಿ ಲಿಪ್‌ಸ್ಟಿಕ್ ಬಳಸಿದರೆ ಲುಕ್ ಆಕರ್ಷಕವಾಗಿರುವುದು.
40+ ವಯಸ್ಸಿನವರಿಗೆ
40 ನಂತರ ತ್ವಚೆಯ ಬಿಗಿ ಕಡಿಮೆಯಾಗುವುದು. ಕಣ್ಣಿನ ಬಳಿ ನೆರಿಗೆ ಮೂಡಲಾರಂಭಿಸುತ್ತದೆ. ಈ ಪ್ರಾಯದವರಿಗೆ ತೆಳುವಾದ ಮೇಕಪ್ ಆಕರ್ಷಕ ಲುಕ್ ನೀಡುತ್ತದೆ. ಕ್ರೀಮ್ ಗಳನ್ನು ಬಳಸುವ ಮುನ್ನ ಮಾಯಿಶ್ಚರೈಸರ್ ಹಚ್ಚಿ ನಂತರ ಹಚ್ಚುವುದು ಒಳ್ಳೆಯದು. ಲಿಪ್ ಸ್ಟಿಕ್ ಬಳಸುವುದಾದರೆ ತೆಳು ಬಣ್ಣದಾಗಿರಲಿ. ಲಿಪ್ ಬಾಮ್ ಅನ್ನು ಪ್ರತೀದಿನ ಬಳಸಿ. ಇದು ತುಟಿಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು.