ಡ್ರೈ ಫ್ರೂಟ್ಸ್ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಅದರಲ್ಲೂ ನೆನೆಸಿದ ಡ್ರೈಫ್ರೂಟ್ಸ್ ತಿನ್ನುವುದರಿಂದ ನಿಮಗೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಯಾವ ಡ್ರೈಫ್ರೂಟನ್ನು ನೆನೆಸಿ ತಿನ್ನಬೇಕು? ಯಾವುದನ್ನು ಹಾಗೇ ಸೇವಿಸಿದರೆ ಉತ್ತಮ ಅನ್ನೋದನ್ನು ತಿಳಿದುಕೊಂಡರೆ ಉತ್ತಮ. ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.
ಎಲ್ಲಾ ಡ್ರೈಫ್ರೂಟ್‌ಗಳನ್ನು ನೆನೆಸಿ ತಿನ್ನಬಾರದು. ಗೋಡಂಬಿ, ವಾಲ್‌ನಟ್, ಕಡಲೆಕಾಯಿ, ಪಿಸ್ತಾ ಮತ್ತು ಖರ್ಜೂರವನ್ನು ನೆನೆಸದೆ ಸೇವಿಸಬಹುದು. ವಾಲ್‌ನಟ್‌ನಲ್ಲಿ ಅಗತ್ಯವಾದ ಕೊಬ್ಬಿನಾಮ್ಲಗಳಿವೆ, ರಾತ್ರಿ ನೆನೆಸಿಟ್ಟರೆ ಅವು ಖಾಲಿಯಾಗಿಬಿಡುತ್ತವೆ. ಹಾಗಾಗಿ ವಾಲ್ನಟ್ ಅನ್ನು ಹಾಗೇ ತಿನ್ನಿ. ಖರ್ಜೂರ ಮತ್ತು ಒಣದ್ರಾಕ್ಷಿಗಳನ್ನು ಎರಡೂ ರೀತಿಯಲ್ಲಿ ಸೇವಿಸಬಹುದು.
ಡ್ರೈಫ್ರೂಟ್‌ಗಳನ್ನು ನೆನೆಸುವುದರಿಂದ ಅವು ಮೊಳಕೆಯೊಡೆಯಲು ಕಾರಣವಾಗುತ್ತದೆ. ಇದು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಡ್ರೈಫ್ರೂಟ್ ನೆನೆಸಿದಾಗ ಹೊರ ಪದರಗಳಲ್ಲಿರುವ ಫೈಟೇಟ್ ಮತ್ತು ಆಕ್ಸಲೇಟ್‌ಗಳಂತಹ ಪೋಷಕಾಂಶಗಳನ್ನು ತೆಗೆದು ಹಾಕಬಹುದು. ಒಣದ್ರಾಕ್ಷಿಗಳನ್ನು ನೆನೆಸಿ ತಿಂದಾಗ ಅದರಲ್ಲಿ ಬಳಕೆ ಮಾಡಿದ್ದ ಹಾನಿಕಾರಕ ಪ್ರಿಸರ್ವೇಟಿವ್‌ಗಳನ್ನು ತೆಗೆದುಹಾಕಬಹುದು.
ಬಾದಾಮಿ ಸಿಪ್ಪೆಯಲ್ಲಿ ಟ್ಯಾನಿನ್ ಅಂಶವಿದೆ. ಬಾದಾಮಿಯನ್ನು ನೇರವಾಗಿ ಸೇವಿಸಿದರೆ ಅದು ಜೀರ್ಣವಾಗುವುದು ಕಷ್ಟ. ಟ್ಯಾನಿನ್ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಬಾದಾಮಿಯನ್ನು ನೆನೆಸಿ ಸಿಪ್ಪೆ ಸುಲಿದು ತಿನ್ನುವುದು ಒಳ್ಳೆಯದು.