ಪ್ರಾಣಿ ಪ್ರೇಮಿಗಳು ತಾವು ಹೋದಲ್ಲೆಲ್ಲ ತಮ್ಮ ಸಾಕು ಪ್ರಾಣಿಯನ್ನು ಕರೆದೊಯ್ಯಲು ಬಯಸ್ತಾರೆ. ವಿಮಾನದಲ್ಲೂ ಪ್ರಯಾಣ ಮಾಡಬೇಕೆಂಬ ಆಸೆ ಅಥವಾ ಅನಿವಾರ್ಯತೆ ಅನೇಕರಿಗಿರುತ್ತದೆ. ನೀವು ನಿಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಅಥವಾ ಯಾವುದೇ ಪಕ್ಷಿಗಳ ಜೊತೆ ವಿಮಾನ ಪ್ರಯಾಣ ಬೆಳೆಸಬೇಕು ಅಂದ್ರೆ ಮೊದಲು ವಿಮಾನಯಾನ ಸಂಸ್ಥೆಗಳ ನಿಯಮ ತಿಳಿದಿರಬೇಕು. ಭಾರತದಲ್ಲಿ ಯಾವ ವಿಮಾನಯಾನ ಸಂಸ್ಥೆ ನಿಮಗೆ ಪ್ರಾಣಿಗಳನ್ನು ಕರೆಯೊಯ್ಯಲು ಅನುಮತಿ ನೀಡುತ್ತದೆ ಎನ್ನುವ ಅರಿವಿರಬೇಕು.
ವಿಮಾನದಲ್ಲಿ ಪ್ರಾಣಿಗಳನ್ನು ಕರೆದೊಯ್ಯುವ ವಿಷ್ಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಯಾವುದೇ ಸ್ಪಷ್ಟ ನಿಯಮವಿಲ್ಲ. ಕಳೆದ ವರ್ಷ ಜನವರಿಯಲ್ಲಿ ವಾಯುಯಾನ ಸಚಿವಾಲಯದ ಸೂಚನೆ ಪ್ರಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು, ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಇದ್ರ ಬಗ್ಗೆ ನಿಯಮ ರೂಪಿಸಲು ಸ್ವಾತಂತ್ರ ನೀಡಿದ್ದರು. ಅದರಂತೆ ವಿಮಾನಯಾನ ಸಂಸ್ಥೆಗಳು ನಿರ್ಧಾರ ತೆಗೆದುಕೊಂಡಿವೆ.
ಭಾರತದಲ್ಲಿ ಎರಡು ವಿಮಾನಯಾನ ಸಂಸ್ಥೆಗಳು ಸಾಕು ಪ್ರಾಣಿಗಳನ್ನು ಕರೆದೊಯ್ಯಲು ಅನುಮತಿ ನೀಡುತ್ತವೆ. ನೀವು ಏರ್ ಇಂಡಿಯಾ ಮತ್ತು ಅಕಾಸ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಸಾಕುಪ್ರಾಣಿ ಕರೆದುಕೊಂಡು ಹೋಗಬಹುದು. ಏರ್ ಇಂಡಿಯಾದಲ್ಲಿ ನಾಯಿ, ಬೆಕ್ಕು ಮತ್ತು ಪಕ್ಷಿಗಳಿಗೆ ಅನುಮತಿ ಇದೆ. ಅಕಾಸ ಏರ್‌ಲೈನ್ಸ್ ನಾಯಿ ಮತ್ತು ಬೆಕ್ಕಿಗೆ ಮಾತ್ರ ಅನುಮತಿ ನೀಡುತ್ತದೆ. ದೊಡ್ಡ ಗಾತ್ರದ ಪ್ರಾಣಿಗಳನ್ನು ಕೊಂಡೊಯ್ಯಲು ಕಾರ್ಗೋ ಆಯ್ಕೆಯನ್ನು ಇವು ನೀಡುತ್ತವೆ.
ಏರ್ ಇಂಡಿಯಾ ಎಂಟು ವಾರ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಸಾಕುಪ್ರಾಣಿಗಳಿಗೆ ಅವಕಾಶ ನೀಡಿದ್ರೆ ಅಕಾಸ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸಾಕುಪ್ರಾಣಿಗಳಿಗೆ ಅನುಮತಿ ನೀಡುತ್ತದೆ. ಸಾಕುಪ್ರಾಣಿಗಳ ವ್ಯಾಕ್ಸಿನೇಷನ್ ಮತ್ತು ಆರೋಗ್ಯ ಪ್ರಮಾಣಪತ್ರ ನೀಡಬೇಕು. 48 ಗಂಟೆ ಮೊದಲೇ ಮಾಹಿತಿ ತಿಳಿಸಬೇಕು.