ಪ್ರತಿಯೊಬ್ಬ ತಂದೆ – ತಾಯಂದಿರೂ ತಮ್ಮ ಮಕ್ಕಳ ಮೇಲೆ ಆಗಾಧವಾದ ಕನಸು, ನಿರೀಕ್ಷೆ ಕಟ್ಟಿಕೊಂಡಿರುತ್ತಾರೆ. ಮಕ್ಕಳು ಸುಸಂಸ್ಕೃತರಾಗಬೇಕು ಅವರಿಗೆ ಸಮಾಜದಲ್ಲಿ ಒಂದು ಒಳ್ಳೆಯ ಮನ್ನಣೆ ಸಿಗಬೇಕು, ತನ್ನ ಮಗ/ಮಗಳು ಒಬ್ಬ ಒಳ್ಳೆಯ ವ್ಯಕ್ತಿಯಾಗಬೇಕು ಎಂಬ ಆಸೆ ತಂದೆ – ತಾಯಂದಿರದ್ದು. ಆದರೆ ಕೆಲವು ಮಕ್ಕಳು ಬೆಳೆಯುತ್ತಾ ದಾರಿ ತಪ್ಪುತ್ತಾರೆ ಇದಕ್ಕೆ ಕಾರಣವೇನು ಗೊತ್ತಾ…?
ಸ್ನೇಹ ಬಳಗ: ವ್ಯಕ್ತಿಯೊಬ್ಬನ ಉನ್ನತಿ, ಅವನತಿಗೆ ಅವನ ಸ್ನೇಹಿತರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಕಾರಣರಾಗುತ್ತಾರೆ. ಒಳ್ಳೆಯ ಸ್ನೇಹಿತರು ಸಿಗುವುದು ಕೂಡ ಒಂದು ಅದೃಷ್ಟನೇ ಎನ್ನಬಹುದು. ದುರ್ಜನರ ಸಂಗದಿಂದ ಜೀವನ ಮತ್ತಷ್ಟು ಹಾಳಾಗುತ್ತದೆ. ಹಾಗಾಗಿ ಮಕ್ಕಳ ಸ್ನೇಹಿತರು ಯಾರೆಂದು ಮೊದಲು ತಿಳಿದುಕೊಳ್ಳಿ. ಇದರಿಂದ ಮಕ್ಕಳು ದಾರಿ ತಪ್ಪುವುದನ್ನು ತಡೆಯಬಹುದು.
ಸಮಯದ ಪರಿಪಾಲನೆ: ಮಕ್ಕಳು ದೊಡ್ಡವರಾಗುತ್ತಾ ಬಂದಂತೆ ಅವರಿಗೆ ಸಮಯ ಪರಿಪಾಲನೆ ಕುರಿತು ತಿಳಿಸಿಕೊಡಿ. ಹಾಗೇ ತಡವಾಗಿ ಮನೆಗೆ ಬರುವುದು, ಬೆಳಿಗ್ಗೆ ತಡವಾಗಿ ಏಳುವುದು ಇಂತಹ ಅಭ್ಯಾಸಗಳನ್ನು ಶುರುಮಾಡಿಕೊಳ್ಳುತ್ತಾರೆ. ಇದನ್ನು ಆರಂಭದಲ್ಲಿಯೇ ಸರಿ ಮಾಡಬೇಕು. ಸಂಜೆ ಒಂದು ನಿರ್ದಿಷ್ಟ ಸಮಯದೊಳಗೆ ಮನೆಗೆ ಬರಬೇಕು ಎಂಬ ಷರತ್ತು ವಿಧಿಸಿ. ಆಗ ಮಕ್ಕಳಿಗೆ ಸಮಯದ ಬೆಲೆ ಗೊತ್ತಾಗುತ್ತದೆ. ಶಿಸ್ತು ರೂಢಿಸಿಕೊಳ್ಳುತ್ತಾರೆ.