ದಾಂಪತ್ಯ ಗಟ್ಟಿಯಾಗಿರಲು ವಿಶ್ವಾಸ ಅತ್ಯಗತ್ಯ. ನಂಬಿಕೆ, ವಿಶ್ವಾಸ, ಪ್ರೀತಿ, ವಾತ್ಸಲ್ಯಗಳೆಲ್ಲವೂ ಒಂದು ಸಂಬಂಧ ಸುಂದರವಾಗಿರಲು ಮಹತ್ವದ ಪಾತ್ರ ವಹಿಸುತ್ತವೆ. ಇದ್ರಲ್ಲಿ ಒಂದು ಕೊಂಡಿ ಕಳಚಿದ್ರೂ ಸಂಬಂಧ ಹಾಳಾಗುತ್ತದೆ. ವಿಶ್ವಾಸ ದ್ರೋಹವಾಗುತ್ತದೆ. ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಡಬಹುದು. ಪತಿ ಇನ್ನೊಂದು ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂಬುದು ನಿಮಗೆ ಗೊತ್ತಾದಾಗ ದುಡುಕುವುದು ಯೋಗ್ಯವಲ್ಲ.
ಸಂಸಾರವನ್ನು ಗಟ್ಟಿಯಾಗಿಡುವ ಶಕ್ತಿ ತಾಳ್ಮೆಗಿದೆ. ನಿಮ್ಮ ಸಂಗಾತಿ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂಬುದು ಗೊತ್ತಾದ ತಕ್ಷಣ ಕೋಪಕ್ಕೆ ಬುದ್ದಿ ಕೊಡಬೇಡಿ. ಜಗಳದಿಂದ ಯಾವುದೂ ಸರಿಯಾಗುವುದಿಲ್ಲ. ಮೌನವಾಗಿ ಇಬ್ಬರ ನಡುವೆ ಯಾವ ಕಾರಣಕ್ಕೆ ಬಿರುಕು ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಹಚ್ಚಿ.
ನಿಮ್ಮ ಪತಿ ಬೇರೆ ಮಹಿಳೆಗೆ ಆಕರ್ಷಿತವಾಗಲು ಅನೇಕ ಕಾರಣಗಳಿರುತ್ತವೆ. ಪತಿ ಜೊತೆ ಜಗಳ ಆಡುವ ಬದಲು ಪ್ರೀತಿಯಿಂದ ಮಾತನಾಡಿ. ಕಾರಣ ತಿಳಿದುಕೊಳ್ಳಿ. ಬೇರೆಯಾಗಲು ನೀವು ಮಾಡಿದ ತಪ್ಪೇನು ಎಂಬುದನ್ನು ಪತ್ತೆ ಹಚ್ಚಿ ತಪ್ಪು ತಿದ್ದಿಕೊಂಡು ನಡೆಯಿರಿ. ಸಣ್ಣ ಕಾರಣಕ್ಕೆ ಇಬ್ಬರ ನಡುವೆ ಶುರುವಾಗುವ ಭಿನ್ನಾಭಿಪ್ರಾಯ ದಿನ ಕಳೆದಂತೆ ದೊಡ್ಡ ಮರವಾಗಿ ಬೆಳೆಯುತ್ತದೆ. ಲೈಂಗಿಕ ಜೀವನದಲ್ಲೂ ಆಸಕ್ತಿ ಇಲ್ಲವಾಗುತ್ತದೆ. ಆಗ ಪತಿ ಬೇರೆ ಮಹಿಳೆಯರಿಗೆ ಆಕರ್ಷಿತನಾಗುವ ಸಾಧ್ಯತೆಯಿರುತ್ತದೆ.
ಮನೆ, ಮಕ್ಕಳು, ಕಚೇರಿ, ಸ್ನೇಹಿತರು ಎಲ್ಲ ಕೆಲಸದ ಮಧ್ಯೆ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಈ ಎಲ್ಲ ಕೆಲಸಗಳ ಮಧ್ಯೆಯೇ ಕೆಲ ಸಮಯವನ್ನು ಸಂಗಾತಿಗಾಗಿ ಮೀಸಲಿಡಿ. ಅವ್ರ ಜೊತೆ ಸಮಯ ಕಳೆಯಿರಿ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಿ.
ರಾತ್ರಿ ಮಲಗುವ ಮುನ್ನ ದಿನ ಹೇಗೆ ಕಳೆಯಿತು. ಬೇಸರಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ನಿಮ್ಮ ಜೊತೆ ಸದಾ ನಾನಿದ್ದೇನೆಂಬ ಭರವಸೆ ನೀಡಿ. ಇಬ್ಬರ ನಡುವೆ ರೋಮ್ಯಾನ್ಸ್ ಎಂದೂ ಸಾಯದಂತೆ ನೋಡಿಕೊಳ್ಳಿ. ಆಗಾಗ ಸರ್ಪ್ರೈಸ್ ನೀಡುತ್ತಿರಿ. ಹೊಸ ಹೊಸ ವಿಧಾನದ ಮೂಲಕ ಪತಿಯನ್ನು ಆಕರ್ಷಿಸಿ.
ಪತಿ ಜೊತೆ ರಜೆಯನ್ನು ಆರಾಮವಾಗಿ, ಏಕಾಂತದಲ್ಲಿ ಕಳೆಯಿರಿ. ಪತಿ ಯಾವ ಮಹಿಳೆಗೆ ಆಕರ್ಷಿತನಾಗಿದ್ದಾನೋ ಆಕೆಯನ್ನು ಭೇಟಿಯಾಗಿ ಮಾತನಾಡಿ. ಆಕೆಗೆ ಪತಿಯಿಂದ ದೂರ ಹೋಗುವಂತೆ ತಿಳಿ ಹೇಳಿ. ಜಗಳವಾಡಿದ್ರೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಹಾಗಾಗಿ ನಿಧಾನವಾಗಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ನಿಮ್ಮ ದಾಂಪತ್ಯ ಜೀವನ ಮತ್ತೆ ಸರಿಯಾಗುವಂತೆ ಮಾಡಿಕೊಳ್ಳಿ. ನೀವು ದುಡುಕಿ ತೆಗೆದುಕೊಳ್ಳುವ ನಿರ್ಧಾರ ವಿಚ್ಛೇದನಕ್ಕೆ ಬಂದು ನಿಲ್ಲಬಹುದು ಎಚ್ಚರ.