ಪ್ರಪಂಚದಾದ್ಯಂತ ವಾಟ್ಸಾಪ್ ಬಳಕೆಯಲ್ಲಿದೆ. ಇದು ಬಹಳ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್. ಸದ್ಯ ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಇತ್ತೀಚೆಗಷ್ಟೆ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಲಕ್ಷಾಂತರ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದೆ. ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ಬಂದ್ ಮಾಡಲಾಗಿದೆ. ವಾಟ್ಸಾಪ್ ಬಳಕೆದಾರರ ಖಾತೆಯನ್ನು ಯಾವಾಗ ನಿಷೇಧಿಸುತ್ತದೆ? ಅದರ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ವಾಟ್ಸಾಪ್ ಖಾತೆಯನ್ನು ಏಕೆ ನಿಷೇಧಿಸಲಾಗುತ್ತದೆ?
ಬಳಕೆದಾರರು ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಿದರೆ, ತಪ್ಪು ಮಾಹಿತಿಯನ್ನು ಹರಡಿದರೆ ಅಥವಾ ವಾಟ್ಸಾಪ್ ಮೂಲಕ ವಂಚನೆ ಮಾಡಿದರೆ ಖಾತೆಯನ್ನು ನಿಷೇಧಿಸಬಹುದು. ಅಶ್ಲೀಲತೆ, ಹಿಂಸೆ ಅಥವಾ ದ್ವೇಷಪೂರಿತ ವಿಷಯವನ್ನು ಹಂಚಿಕೊಂಡರೂ ಸಹ ಬಳಕೆದಾರರ ವಿರುದ್ಧ ವಾಟ್ಸಾಪ್ ಕ್ರಮ ತೆಗೆದುಕೊಳ್ಳಬಹುದು.
ಭಾರತ ಸರ್ಕಾರದ ಐಟಿ ನಿಯಮ 2021ರ ಅನ್ವಯ ವಾಟ್ಸಾಪ್ ಖಾತೆಗಳನ್ನು ಬಂದ್ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಫೆಬ್ರವರಿ 1 ರಿಂದ ಫೆಬ್ರವರಿ 29ರ ನಡುವೆ ಒಟ್ಟು 76,28,000 ಖಾತೆಗಳನ್ನು ಮುಚ್ಚಿರುವುದಾಗಿ ವಾಟ್ಸಾಪ್ ಮಾಹಿತಿ ನೀಡಿದೆ. ಇವುಗಳಲ್ಲಿ 14,24,000 ಖಾತೆಗಳನ್ನು ಯಾವುದೇ ಬಳಕೆದಾರರು ದೂರು ನೀಡುವ ಮುನ್ನವೇ ಮುಚ್ಚಲಾಗಿದೆ. ಅಂದರೆ ವಾಟ್ಸಾಪ್ ಸ್ವತಃ ಈ ಖಾತೆಗಳಲ್ಲಿ ತಪ್ಪು ಚಟುವಟಿಕೆಯನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಂಡಿದೆ.
16,500ಕ್ಕೂ ಹೆಚ್ಚು ದೂರು!
ಭಾರತದಲ್ಲಿ 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ಮೆಸೇಜಿಂಗ್ ಅಪ್ಲಿಕೇಶನ್ ಫೆಬ್ರವರಿಯಲ್ಲಿ ದಾಖಲೆಯ 16,618 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 22 ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗಿದೆ. ಕ್ರಮ ಕೈಗೊಳ್ಳುವುದು ಎಂದರೆ ದೂರಿನ ಆಧಾರದ ಮೇಲೆ ವಾಟ್ಸಾಪ್, ಖಾತೆಯ ವಿರುದ್ಧ ಕ್ರಮ ಕೈಗೊಂಡಿದೆ ಎಂದರ್ಥ. ಉದಾಹರಣೆಗೆ ಖಾತೆಯನ್ನು ಮುಚ್ಚುವುದು ಅಥವಾ ಹಿಂದೆ ಮುಚ್ಚಿದ ಖಾತೆಯನ್ನು ಮರುಪ್ರಾರಂಭಿಸುವುದು.
ನಕಲಿ ಸುದ್ದಿಗಳು ಮತ್ತು ತಪ್ಪುಗಳನ್ನು ತಡೆಯಲು ಹಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದಾಗಿ ಕಂಪನಿ ಹೇಳಿದೆ. ಇದಕ್ಕಾಗಿ ಸೆಕ್ಯೂರಿಟಿ ಫೀಚರ್ಗಳ ಜೊತೆಗೆ ಡೇಟಾ ವಿಜ್ಞಾನಿಗಳು, ಕಾನೂನು, ಆನ್ಲೈನ್ ಭದ್ರತೆ ಮತ್ತು ತಂತ್ರಜ್ಞಾನದ ತಜ್ಞರ ತಂಡವನ್ನು ಸಹ ಬಳಸಿಕೊಳ್ಳುತ್ತದೆ. ಇವರು ಖಾತೆಯನ್ನು ರಚಿಸಿದ ನಂತರ ಅದರ ಚಟುವಟಿಕೆಯ ಮೇಲೆ ಕಣ್ಣಿಡುತ್ತಾರೆ ಮತ್ತು ಬಳಕೆದಾರರ ದೂರುಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ.