ಕೋವಿಡ್ 19 ಸಾಂಕ್ರಾಮಿಕ ವಿಶ್ವಕ್ಕೆ ಬಂದಪ್ಪಳಿಸಿ 19 ತಿಂಗಳುಗಳೇ ಕಳೆದಿದೆ. ಈಗಾಗಲೇ ಮಿಲಿಯನ್ಗಟ್ಟಲೇ ಮಂದಿ ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ನಾವು ಸೋಂಕನ್ನ ಹೇಗೆ ನಿರ್ವಹಿಸುತ್ತೇವೆ ಅನ್ನೋದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.
138ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಸೆಷನ್ನ್ನುದ್ದೇಶಿಸಿ ಮಾತನಾಡಿದ ಟೆಡ್ರೋಸ್, ಕೊರೊನಾ ಪ್ರಕರಣವನ್ನ ಆದಷ್ಟು ಬೇಗ ಗುರುತಿಸಿ, ಅವರನ್ನ ಪ್ರತ್ಯೇಕಿಸಿ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮಾತ್ರ ಯಶಸ್ಸು ನಮ್ಮದಾಗಲಿದೆ ಎಂದು ಹೇಳಿದ್ದಾರೆ.
ತುಂಬಾ ಜನರು ನನ್ನ ಬಳಿ ಕೊರೊನಾ ಯಾವಾಗ ಮುಗಿಯುತ್ತೆ ಎಂದು ಕೇಳುತ್ತಾರೆ. ಇದಕ್ಕೆ ನನ್ನ ಬಳಿ ಸರಳ ಉತ್ತರವಿದೆ, ವಿಶ್ವವು ಯಾವಾಗ ಕೊರೊನಾವನ್ನ ಕೊನೆಗಾಣಿಸಬೇಕೆಂದು ಬಯಸುತ್ತದೆಯೋ ಆಗ ಕೊರೊನಾ ಖಂಡಿತವಾಗಿಯೂ ನಾಶವಾಗುತ್ತದೆ. ಕೊರೊನಾ ಹರಡುವಿಕೆಯನ್ನ ಕಡಿಮೆ ಮಾಡುವಲ್ಲಿ ಸಹಕಾರ ನೀಡಿದಲ್ಲಿ ಜನರ ಜೀವವನ್ನ ಕಾಪಾಡಬಹುದಾಗಿದೆ. ಕೊರೊನಾವನ್ನ ಕೊನೆಗಾಣಿಸೋದು ಮಾತ್ರ ನಮ್ಮ ಗುರಿಯಾಗಿರಬೇಕು. ನಾವಿಲ್ಲಿ ಯಾರ ಜೊತೆಯೂ ರೇಸ್ ಮಾಡಬೇಕಾಗಿಲ್ಲ. ವೈರಸ್ ವಿರುದ್ಧ ಹೋರಾಡೋದಷ್ಟೇ ಇಲ್ಲಿ ಮುಖ್ಯ ಎಂದು ಹೇಳಿದ್ದಾರೆ.