ಒಡಿಶಾ ಸರ್ಕಾರದ ಅಧಿಕಾರಿಯೊಬ್ಬ ಮಹಾ ಕುಂಭ ಮೇಳದ ಯಾತ್ರೆಯಿಂದ ಹಿಂತಿರುಗುವಾಗ ಕುಡಿದು ಮಲಗಿದ್ದ ಕಾರಣ ಬಿಹಾರದಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಪ್ರಯಾಗ್‌ರಾಜ್‌ನಲ್ಲಿ ಪುಣ್ಯ ಸ್ನಾನ ಮಾಡಿ ವಾಪಸಾಗುತ್ತಿದ್ದ ಅಧಿಕಾರಿ ಬನಾರಸ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಕಾರಿನಲ್ಲಿ ಮಲಗಿದ್ದ. ಬಿಹಾರದ ಗಡಿ ತಲುಪಿದಾಗ ಅವನನ್ನು ಮೊಹನಿಯಾ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಯಿತು.
ತಪಾಸಣೆ ವೇಳೆ ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದ್ದು, ಪೇದೆ ಕುನಾಲ್ ಕುಮಾರ್, ಅಧಿಕಾರಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ 90 ಸಾವಿರ ರೂಪಾಯಿ ಲಂಚ ಪಡೆದು ಬಿಟ್ಟು ಕಳುಹಿಸಿದ್ದ. ಇದರಲ್ಲಿ 10 ಸಾವಿರ ರೂಪಾಯಿಗಳನ್ನು ಆನ್‌ಲೈನ್ ಮೂಲಕ ಪಡೆದಿದ್ದ.
ನಂತರ, ಒಡಿಶಾ ಅಧಿಕಾರಿ ನಿಷೇಧ ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಿದ್ದು, ಜಂಟಿ ಆಯುಕ್ತರ ನಿರ್ದೇಶನದಂತೆ ಅಬಕಾರಿ ಅಧೀಕ್ಷಕ ಕೈಮೂರ್ ಸಂತೋಷ್ ಶ್ರೀವಾಸ್ತವ ಅವರು ಇಡೀ ಪ್ರಕರಣದ ತನಿಖೆ ನಡೆಸಿದ್ದಾರೆ.
ದೂರುದಾರರು ವೀಡಿಯೊ ಸಾಕ್ಷ್ಯವನ್ನು ಸಹ ಅಬಕಾರಿ ಇಲಾಖೆಯ ತಂಡಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಪೇದೆ ಕುನಾಲ್ ಕುಮಾರ್ ಅವರ ಧ್ವನಿ ಮುದ್ರಣವಾಗಿದೆ. ಪೇದೆಯನ್ನು ವಿಚಾರಿಸಿದಾಗ, ಚೆಕ್‌ಪೋಸ್ಟ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಕೆಳಗೆ ಚಕ್ರದಲ್ಲಿ ಬಚ್ಚಿಟ್ಟಿದ್ದ 10,500 ರೂಪಾಯಿ ನಗದು ಪತ್ತೆಯಾಗಿದೆ. ಅಬಕಾರಿ ಅಧೀಕ್ಷಕ ಸಂತೋಷ್ ಶ್ರೀವಾಸ್ತವ, ಪೇದೆಯನ್ನು ಬಂಧಿಸಿ ಮೊಹನಿಯಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪೇದೆಗೆ ಸಹಾಯ ಮಾಡಿದ ಹೋಟೆಲ್ ಉದ್ಯೋಗಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪೇದೆ ಭೋಜ್‌ಪುರ ಜಿಲ್ಲೆಯ ರುದ್ರನಗರದವರು ಎಂದು ಹೇಳಲಾಗುತ್ತಿದೆ. ಅವರು ಜಂಟಿ ಆಯುಕ್ತರ ಆದೇಶದ ಮೇರೆಗೆ ಮೊಹನಿಯಾ ಇಂಟಿಗ್ರೇಟೆಡ್ ಚೆಕ್‌ಪೋಸ್ಟ್‌ನಲ್ಲಿ ಮದ್ಯದ ವಾಹನಗಳನ್ನು ಪರಿಶೀಲಿಸಲು ಗಯಾ ಜಿಲ್ಲೆಯಿಂದ ಬಂದಿದ್ದರು. ಹೋಟೆಲ್ ಉದ್ಯೋಗಿ ಉತ್ತರ ಪ್ರದೇಶದ ಜಮಾನಿಯಾ ಜಿಲ್ಲೆಯ ದೇಹರಿಯಾ ಗ್ರಾಮದ ಸತೀಶ್ ಯಾದವ್ ಎಂದು ಹೇಳಲಾಗುತ್ತಿದೆ. ಆತನನ್ನೂ ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ಖಜಾನೆ ಇಲಾಖೆಯ ಅಧಿಕಾರಿಯೊಬ್ಬರು ತಾವು ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಮಹಾ ಕುಂಭದಲ್ಲಿ ಸ್ನಾನ ಮಾಡಲು ಹೋಗಿದ್ದೆವು ಎಂದು ತಿಳಿಸಿದ್ದಾರೆ. ಹಿಂತಿರುಗುವಾಗ ಟ್ರಾಫಿಕ್ ಜಾಮ್ ಹೆಚ್ಚಾಗಿದ್ದರಿಂದ ಬನಾರಸ್‌ನಲ್ಲಿ ಮದ್ಯದ ಬಾಟಲಿ ಖರೀದಿಸಿ ಕಾರಿನಲ್ಲಿ ಮಲಗಿದ್ದೆವು. ಬಿಹಾರ ತಲುಪಿದ್ದು ಯಾವಾಗ ಎಂದು ಗೊತ್ತಾಗಲಿಲ್ಲ. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುವಾಗ ಪೇದೆ ಹಿಡಿದಿದ್ದರು. ನಂತರ ಲಂಚ ಪಡೆದು ಬಿಟ್ಟು ಕಳುಹಿಸಿದರು ಎಂದು ಹೇಳಿದ್ದಾರೆ.