ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೋವಿಡ್ ಸ್ಥಿತಿಗತಿಗಳ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಚರ್ಚೆ ನಡೆಸಿದ್ದಾರೆ.
ಆದರೆ, ಸಭೆಯಲ್ಲಿ ಅವರು ಆಡಿದ ಮಾತು ಸುದ್ದಿವಾಹಿನಿಗಳಲ್ಲಿ ನೇರ ಪ್ರಸಾರವಾಗಿ ವಿವಾದಕ್ಕೆ ಕಾರಣವಾಗಿದೆ. ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡುವಂತಹ ನಡೆಯನ್ನು ಕೇಜ್ರಿವಾಲ್ ಅನುಸರಿಸಿದ್ದಾರೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ನಾಲ್ಕು ಗೋಡೆಗಳ ಒಳಗೆ ನಡೆಯುವ ಸಭೆಯನ್ನು ನೇರ ಪ್ರಸಾರ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ಸಂವಾದ ನೇರ ಪ್ರಸಾರವಾಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಧಾನಿ ಮೋದಿ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಶಿಷ್ಟಾಚಾರಕ್ಕೆ ವಿರುದ್ಧವಾಗಿ ಇಂತಹ ಸಭೆಯನ್ನು ಯಾರೂ ಪ್ರಸಾರ ಮಾಡಿದರು ಸರಿಯಲ್ಲವೆಂದು ತಿಳಿಸಿದ್ದು, ಘನತೆಯನ್ನು ಕಾಯ್ದುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಅರವಿಂದ್ ಕೇಜ್ರಿವಾಲ್ ಟಿವಿಯಲ್ಲಿ ನೇರ ಪ್ರಸಾರ ಮಾಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪ್ರಧಾನಿ ಕಛೇರಿಯ ಅನುಮತಿ ಇಲ್ಲದೆ ಆಂತರಿಕ ಸಭೆ ಸಂವಾದ ನೇರ ಪ್ರಸಾರ ಮಾಡಲಾಗಿದೆ ಎಂದು ಹೇಳಲಾಗಿದೆ.