ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಅವರು ಭಾರತದ ಅತ್ಯಂತ ಶ್ರೀಮಂತರಲ್ಲೊಬ್ಬರಾಗಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ ಸ್ವತಃ ಅವರ ತಾಯಿಗೆ ಮಾತ್ರ ತನ್ನ ಮಗ ಇಷ್ಟು ದೊಡ್ಡ ಶ್ರೀಮಂತ ವ್ಯಕ್ತಿ ಎಂಬುದು ತಿಳಿದಿರಲಿಲ್ಲವಂತೆ.
ಹೌದು, ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಅವರು, ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ಶರ್ಮಾ ಅವರ ಕಠಿಣ ಪರಿಶ್ರಮದಿಂದಲೇ ಸಾಧ್ಯವಾಗಿದ್ದು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶರ್ಮಾ, ಇನ್ನೂ ರಸ್ತೆಬದಿಯ ಅಂಗಡಿಗಳಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಾರಂತೆ. ಹಾಗೂ ಹಾಲು ಖರೀದಿಸಲು ಬೆಳಗಿನ ವಾಕ್‌ಗೆ ಕೂಡ ಹೋಗುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಇನ್ನು ಅವರ ತಾಯಿಗೆ ತನ್ನ ಮಗ ಎಷ್ಟು ಶ್ರೀಮಂತ ವ್ಯಕ್ತಿ ಎಂಬುದು ತಿಳಿದಿರಲಿಲ್ಲವಂತೆ.
ಚೀನಾದ ಆಂಟ್ ಗ್ರೂಪ್ 2015 ರಲ್ಲಿ ಪೇಟಿಎಂ ನಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡಿದ ಸಮಯವನ್ನು ನೆನಪಿಸಿಕೊಂಡ ಶರ್ಮಾ ರಾಯಿಟರ್ಸ್‌ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೀರ್ಘಕಾಲದಿಂದ ನನ್ನ ಹೆತ್ತವರಿಗೆ ತಮ್ಮ ಮಗ ಏನು ಮಾಡುತ್ತಿದ್ದಾನೆಂದು ತಿಳಿದಿರಲಿಲ್ಲ. ಒಮ್ಮೆ ತನ್ನ ತಾಯಿ ಹಿಂದಿ ಪತ್ರಿಕೆಯೊಂದರಲ್ಲಿ ತನ್ನ ನಿವ್ವಳ ಮೌಲ್ಯದ ಬಗ್ಗೆ ಓದಿದ್ದಾರೆ. ನಂತರ ಇದು ನಿಜನಾ? ಅವರು ಹೇಳುವಷ್ಟು ಹಣ ನಿನ್ನ ಬಳಿ ಇದೆಯಾ ಎಂದು ಕೇಳಿದ್ದರು ಎಂಬುದನ್ನು ಶರ್ಮಾ ತಿಳಿಸಿದ್ದಾರೆ.
ಸಣ್ಣ ಪಟ್ಟಣದ ಶಾಲಾ ಶಿಕ್ಷಕನ ಮಗನಾಗಿ ಬೆಳೆದ ಶರ್ಮಾ, ತನ್ನ ಸ್ವಂತ ಊರಾದ ಅಲಿಘರ್‌ನ ಹರ್ದುವಾಗಂಜ್‌ನಲ್ಲಿರುವ ಹಿಂದಿ-ಮಾಧ್ಯಮ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಶರ್ಮಾ ಅವರು ರಾಕ್ ಹಾಡುಗಳನ್ನು ಕಂಠಪಾಠ ಮಾಡುವ ಮೂಲಕ ಹಾಗೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಭಾಷಾಂತರಿಸಿದ ಪಠ್ಯಪುಸ್ತಕಗಳನ್ನು ಏಕಕಾಲದಲ್ಲಿ ಓದುವ ಮೂಲಕ ಇಂಗ್ಲಿಷ್ ಕಲಿತಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಫೋರ್ಬ್ಸ್ ಪ್ರಕಾರ, ಶರ್ಮಾ ಅವರ ಪ್ರಸ್ತುತ ನಿವ್ವಳ ಮೌಲ್ಯವು $ 2.4 ಬಿಲಿಯನ್ ಆಗಿದೆ. ಶರ್ಮಾ ಅವರು ನಡೆದು ಬಂದ ಹಾದಿ, ಅವರು ಮಾಡಿರುವ ಸಾಧನೆ ಹಾಗೂ ಯಶಸ್ಸಿನಿಂದ ಅವರು ಇಂದು ಉನ್ನತ ಮಟ್ಟವನ್ನು ತಲುಪಿದ್ದಾರೆ. ಆದರೆ, ಅವರ ವಿನಮ್ರ ಹಿನ್ನೆಲೆಯ ಬಗ್ಗೆ ಬೆರಳೆಣಿಕೆಯ ಜನರಿಗಷ್ಟೇ ತಿಳಿದಿದೆ.