ಹಿಂದೂಗಳ ಹಬ್ಬವಾದ ಗಣೇಶ ಚತುರ್ಥಿಯನ್ನು ವಾರ್ಷಿಕವಾಗಿ ಆಡಂಬರ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಇದನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಉತ್ಸವ ಎಂದೂ ಕರೆಯುತ್ತಾರೆ. ಈ ಹಬ್ಬವು ಗಣೇಶನ ಜನನವನ್ನು ಸೂಚಿಸುತ್ತದೆ ಮತ್ತು 10 ದಿನಗಳವರೆಗೆ ಇರುತ್ತದೆ. ಹಬ್ಬದ ದಿನಾಂಕ, ಇತಿಹಾಸ, ಮಹತ್ವ ಮತ್ತು ಆಚರಣೆಗಳನ್ನು ತಿಳಿಯಲು ಮುಂದೆ ಓದಿ.
ಗಣೇಶ ಚತುರ್ಥಿ ಯಾವಾಗ?
ಗಣೇಶ ಚತುರ್ಥಿ ವಾರ್ಷಿಕವಾಗಿ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಬರುತ್ತದೆ. ಇದು 10 ದಿನಗಳವರೆಗೆ ಇರುತ್ತದೆ, ಮತ್ತು ಕೊನೆಯ ದಿನವನ್ನು ಗಣೇಶ ವಿಸರ್ಜನೆ ಎಂದು ಆಚರಿಸಲಾಗುತ್ತದೆ. ಈ ವರ್ಷ, ಗಣೇಶ ಚತುರ್ಥಿ ಸೆಪ್ಟೆಂಬರ್ 7 ರ ಶನಿವಾರ ಮತ್ತು ಗಣೇಶ ವಿಸರ್ಜನೆ ಸೆಪ್ಟೆಂಬರ್ 17 ರ ಮಂಗಳವಾರ ಬರುತ್ತದೆ. ಸೆಪ್ಟೆಂಬರ್ 17ರ ಮಂಗಳವಾರದಂದು ಅನಂತ ಚತುರ್ದಶಿಯಂದು ಗಣೇಶ ಚತುರ್ಥಿ ಸಮಾಪ್ತಿಯಾಗಲಿದೆ. ಈ ದಿನ, 10 ದಿನಗಳ ಕಾಲ ಪೂಜಿಸಲ್ಪಟ್ಟ ಗಣೇಶನ ಮೂರ್ತಿಯನ್ನು ಗಣಪತಿ ಬಪ್ಪನನ್ನು ಬೀಳ್ಕೊಡಲಾಗುತ್ತದೆ . ಗಣೇಶ ಚತುರ್ಥಿ ಪೂಜಾ ಮುಹೂರ್ತವು ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 1:34 ರವರೆಗೆ ಇರುತ್ತದೆ.
ಗಣೇಶ ಚತುರ್ಥಿ 2024 ಮತ್ತು ಮಹತ್ವ
• ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.
• ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.
• ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.
ಗಣೇಶನ ಹಬ್ಬದ ವೈಶಿಷ್ಟ್ಯತೆಗಳು
• ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು.
ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ..