
ಇಲ್ಲಿನ ಗಣಪತಿ ಸೀದಾ ಚರ್ಚ್‌ಗೆ ಹೋಗಿ ಜೀಸಸ್ ರನ್ನು ಕಂಡು ಕುಶಲೋಪರಿ ವಿಚಾರಿಸಿ ಬಂದಿದ್ದಾರೆ ! ಹೌದು, ಸುಳ್ಳಲ್ಲ, ಇಂಥ ಅಪರೂಪದ ದೇವರುಗಳ ಭೇಟಿಯ ಕ್ಷಣದ ವಿಡಿಯೊವನ್ನು ಟ್ವಿಟರ್‌ನಲ್ಲಿ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಹಂಚಿಕೊಂಡಿದ್ದಾರೆ.
ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಇತ್ತೀಚೆಗೆ ಹಿಂದೂ ಸಮುದಾಯದವರು ಗಣೇಶ ಚತುರ್ಥಿ ಆಚರಿಸಲು ನಿರ್ಧರಿಸಿ ಗಣಪತಿಯ ಸುಂದರ ಮಣ್ಣಿನ ಮೂರ್ತಿಯನ್ನು ತಂದು ಪೆಂಡಾಲ್ ಮಾಡಿ ತರಲು ಯೋಜಿಸಿದ್ದರು. ಚರ್ಚ್ ಮುಂದೆ ಮೆರವಣಿಗೆ ಹಾದು ಬರಬೇಕಿತ್ತು. ಅದೇ ವೇಳೆಗೆ ಚರ್ಚ್ ಕಡೆಯಿಂದ ಗಣಪತಿಯನ್ನು ಒಳಗೆ ಕರೆತಂದು ಸ್ವಲ್ಪ ಹೊತ್ತು ಕೂರಿಸುವ ಬೇಡಿಕೆ ಆಯೋಜಕರಿಗೆ ಬಂದಿದೆ. ಸ್ವಲ್ಪ ಹೊತ್ತು ಯೋಚಿಸಿದ ಆಯೋಜಕರು, ದೇವರುಗಳೇ ಭೇಟಿಗೆ ಮಾಡಿಕೊಂಡ ಅವಕಾಶ ಇರಬೇಕು ಎಂದು ಚಿಂತಿಸಿ, ಒಪ್ಪಿದ್ದಾರೆ.
ಈ ಬಾರಿಯೂ ಹಬ್ಬಗಳ ಅದ್ಧೂರಿ ಆಚರಣೆಗೆ ʼಕೊರೊನಾʼ ಬ್ರೇಕ್
ನಮ್ಮ ನೆಚ್ಚಿನ ಗಣೇಶ ಮೂರ್ತಿ, ಸೀದಾ ಚರ್ಚ್‌ನೊಳಗೆ ಭಜನೆ-ಸಂಗೀತದ ಜತೆಯಲ್ಲಿ ಪ್ರವೇಶಿಸಿದೆ. ಜೀಸಸ್ ಎದುರು ಮೂರ್ತಿ ಇರಿಸಿದಾಗ, ನೆರೆದಿದ್ದ ಹಲವರು ಸಂಭ್ರಮದಿಂದ ಕಣ್ಣಾಲಿಗಳನ್ನು ಒದ್ದೆಯಾಗಿಸಿಕೊಂಡಿದ್ದಾರೆ. ಧರ್ಮ-ದೇವರು ಎಂದು ಜನರು ಬಡಿದಾಡುವಾಗ, ದೇವರುಗಳೇ ಗೆಳೆಯನ ಮನೆಗೆ ಧಾವಿಸಿದಂತಹ ಪರಿಸ್ಥಿತಿ ಇದಾಗಿದೆ ಎಂದು ಹಿರಿಯರೊಬ್ಬರು ಆನಂದಬಾಷ್ಪ ಸುರಿಸಿದ್ದಾರೆ.